Formula 1 ರೇಸ್‌ನತ್ತ ಭಾರತದ ಜೆಹಾನ್ ದಾರುವಾಲಾ
ಫಾರ್ಮುಲಾ 1 ಕಾರಿನ ಟೆಸ್ಟ್ ಡ್ರೈವ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಜೆಹಾನ್ ದಾರುವಾಲಾ
ಸೂಪರ್ ಲೈಸನ್ಸ್ ಪಡೆದುಕೊಳ್ಳುವ ಅರ್ಹತೆ ಗಿಟ್ಟಿಸಿಕೊಂಡ ಮುಂಬೈ ಮೂಲದ ಕಾರ್ ರೇಸರ್
ಫಾರ್ಮುಲಾ 1 ಅಥವಾ ಎಫ್1 ವಿಶ್ವದ ಅತ್ಯಂತ ಪ್ರತಿಷ್ಠಿತ, ಜನಪ್ರಿಯ ಕಾರ್ ರೇಸ್
ಮುಂಬೈ(ಜೂ.25): ಭಾರತದ ಯುವ ರೇಸರ್ ಜೆಹಾನ್ ದಾರುವಾಲಾ (Jehan Daruvala) ಅವರು ಇದೇ ಮೊದಲ ಬಾರಿ ಫಾರ್ಮುಲಾ 1 (Formula 1) ಕಾರಿನ ಟೆಸ್ಟ್ ಡ್ರೈವ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸೂಪರ್ ಲೈಸನ್ಸ್ (ಫಾರ್ಮುಲಾ 1 ಚಲಾಯಿಸಲು ಬೇಕಾದ ಪರವಾನಿಗೆ) ಪಡೆದುಕೊಳ್ಳುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
23 ವರ್ಷದ ಮುಂಬೈನ ಜಿಹಾನ್ ದಾರುವಾಲಾ ಮಂಗಳವಾರ ಮತ್ತು ಬುಧವಾರ 8 ಬಾರಿ ಎಫ್1 ಚಾಂಪಿಯನ್ ಮೆಕ್‌ಲಾರೆನ್ ಎಂಸಿಎಲ್ 35 ಕಾರನ್ನು ಚಾಲನೆ ಮಾಡಿದ್ದಾರೆ. 2 ದಿನಗಳಲ್ಲಿ ಅವರು ಯಾವುದೇ ಸಮಸ್ಯೆ ಇಲ್ಲದಂತೆ 130 ಲ್ಯಾಪ್‌ಗಳನ್ನು ಪೂರ್ತಿಗೊಳಿಸಿದ್ದಾರೆ. ಇದು ಅವರಿಗೆ ಸೂಪರ್ ಲೈಸನ್ಸ್ ಪಡೆದುಕೊಳ್ಳಲು ಬೇಕಾದ ಅಂಕಗಳನ್ನು ಒದಗಿಸಿದ್ದು, ಶೀಘ್ರದಲ್ಲೇ ಲೈಸನ್ಸ್ ಪಡೆಯುವ ಸಾಧ್ಯತೆ ಇದೆ. ಜಿಹಾನ್ ಅವರು ಸದ್ಯ ಫಾರ್ಮುಲಾ 2ರಲ್ಲಿ ಇಟಲಿಯ ಪ್ರೆಮಾ ತಂಡದಲ್ಲಿ ಆಡುತ್ತಿದ್ದು, ಫಾರ್ಮುಲಾ 2 ಗೆದ್ದ ಮೊದಲ ಭಾರತೀಯ ಎನಿಸಿಕೊಳ್ಳುವ ತವಕದಲ್ಲಿದ್ದಾರೆ.
ಏನಿದು ಫಾರ್ಮುಲಾ 1?
ಫಾರ್ಮುಲಾ 1 ಅಥವಾ ಎಫ್1 ವಿಶ್ವದ ಅತ್ಯಂತ ಪ್ರತಿಷ್ಠಿತ, ಜನಪ್ರಿಯ ಕಾರ್ ರೇಸ್ ಎನಿಸಿಕೊಂಡಿದ್ದು, ಪ್ರತೀ ವರ್ಷ ವಿಶ್ವದ ವಿವಿಧ ಕಡೆಗಳಲ್ಲಿ ಸುಮಾರು 20 ರೇಸ್‌ಗಳು ನಡೆಯುತ್ತವೆ. ಏಕೈಕ ಚಾಲಕ ಇರುವ ಕಾರುಗಳ ಮೂಲಕ ರೇಸ್ ನಡೆಯತ್ತವೆ. ಇದರಲ್ಲಿ ಜಾಗತಿಕ ಮಟ್ಟದ ಚಾಲಕರು ಸ್ಪರ್ಧಿಸುತ್ತಾರೆ. ಮೆರ್ಸಿಡೆಸ್, ಫೆರಾರಿ, ರೆನಾಲ್ಟ್ ಮತ್ತು ಹೋಂಡಾ ಕಂಪೆನಿಗಳ ತಂಡಗಳು ರೇಸ್‌ನಲ್ಲಿ ಪಾಲ್ಗೊಳ್ಳುತ್ತವೆ.
ಅರ್ಹತೆ ಪಡೆಯಲು ಏನು ಮಾಡಬೇಕು?
ಎಫ್1 ಕಾರು ಚಲಾಯಿಸಲು ಬೇಕಾದ ಕನಿಷ್ಠ ವರ್ಷ 18. ಯಾವುದೇ ಚಾಲಕ ಎಫ್1 ಕಾರು ಚಲಾಯಿಸಲು ಸೂಪರ್ ಲೈಸನ್ಸ್ ಪಡೆದಿರಬೇಕು. ಫಾರ್ಮುಲಾ 2ರಲ್ಲಿ 6 ರೇಸ್‌ಗಳನ್ನು ಪೂರ್ಣಗೊಳಿಸಿದರೆ ಅಥವಾ ಹಿಂದಿನ 3 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ‘ಗ್ರೇಡ್ ಎ’ ರೇಸ್‌ಗಳಲ್ಲಿ 25 ಸೂಪರ್ ಲೈಸನ್ಸ್ ಅಂಕಗಳನ್ನು ಹೊಂದಿದ್ದರೆ ಅವರಿಗೆ ಎಫ್1 ಕಾರಿನ ಲೈಸನ್ಸ್ ಸಿಗಲಿದೆ.
Formula 1 ರೇಸ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಯುವ ರೇಸರ್ ಜೆಹಾನ್ ದಾರುವಾಲಾ
ಈವರೆಗೆ ಅರ್ಹತೆ ಪಡೆದ ಭಾರತೀಯರು
ಭಾರತದ ರೇಸರ್‌ಗಳ ಪೈಕಿ ಈವರೆಗೆ ಇಬ್ಬರು ಮಾತ್ರ ಎಫ್1 ಕಾರು ಚಾಲನೆ ಮಾಡಿದ್ದಾರೆ. ಕೇರಳದ ನರನ್ ಕಾರ್ತಿಕೇಯನ್ 2005ರಲ್ಲಿ ಮೊದಲ ಬಾರಿ ಎಫ್1 ರೇಸ್‌ನಲ್ಲಿ ಪಾಲ್ಗೊಂಡಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಬಳಿಕ ಚೆನ್ನೈನ ಕರುಣ್ ಚಂದೋಕ್ 2010ರಲ್ಲಿ ಲೋಟಸ್ ಎಚ್‌ಆರ್‌ಆಟಿ ತಂಡದ ಪರ ಎಫ್1 ಕಾರು ಚಾಲನೆ ಮಾಡಿದ್ದಾರೆ.
ಯಾರು ಈ ಜೆಹಾನ್?
ಜೆಹಾನ್ ದಾರುವಾಲಾ ಮುಂಬೈನವರಾಗಿದ್ದು, ಕುರ್ಶಿದ್-ಕೈನಜ್ ದಂಪತಿಯ ಪುತ್ರ. 2011ರಲ್ಲಿ ಅಂದರೆ ತಮ್ಮ 13ನೇ ವಯಸ್ಸಿನಲ್ಲಿ ಕಾರ್ಚ್ ರೇಸ್‌ನಲ್ಲಿ ತೊಡಗಿಸಿಕೊಂಡ ಜೆಹಾನ್ ಬಳಿಕ ಏಷ್ಯಾ, ಯುರೋಪ್‌ಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು. 2014ರಲ್ಲಿ ವಿಶ್ವ ಕಾರ್ಟಿಂಗ್ ಕೂಟದಲ್ಲಿ 3ನೇ ಸ್ಥಾನ ಪಡೆದ ಅವರು 2015ರಲ್ಲಿ ಫಾರ್ಮುಲ್ ರೆನಾಲ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡರು. ಅಲ್ಲಿಂದ ಅವರು ಜಾಗತಿಕ ಮಟ್ಟದ ವಿವಿಧ ರೇಸ್‌ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.