* ಚೆಸ್‌ ಒಲಿಂಪಿಯಾಡ್‌ ಟೂರ್ನಿಯ ಟಾರ್ಚ್ ರಿಲೇಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ* ಚೆಸ್ ಒಲಿಂಪಿಯಾಡ್‌ನ 44ನೇ ಆವೃತ್ತಿಗೆ ಚೆನ್ನೈ ಆತಿಥ್ಯ* 188 ದೇಶಗಳ 2000ಕ್ಕೂ ಅಧಿಕ ಚೆಸ್ ಆಟಗಾರರು ಪಾಲ್ಗೊಳ್ಳಲಿದ್ದಾರೆ

ನವದೆಹಲಿ(ಜೂ.20): ಚೆಸ್‌ ಆಡುವುದರಿಂದ ಸಾಕಷ್ಟು ಪ್ರಯೋಜನಗಳಿದ್ದು, ಮಕ್ಕಳು ಚೆಸ್ ಆಡುವುದರಿಂದ ಸಮಸ್ಯೆಗಳಿಗೆ ಅವರು ಉತ್ತಮವಾಗಿ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಐತಿಹಾಸಿಕ ಚೆಸ್‌ ಒಲಿಂಪಿಯಾಡ್‌ ಟೂರ್ನಿಯ ಟಾರ್ಚ್ ರಿಲೇಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿ ಮಾತನಾಡಿದರು.

ಭಾರತೀಯರೇ ಪರಿಚಯಿಸಿದ ಚದುರಂಗ ಅಥವಾ ಚೆಸ್ ಕುರಿತಂತೆ ಮಾತನಾಡಿದ ಪ್ರಧಾನಿ ಮೋದಿ, ಈ ಚೆಸ್ ಆಡುವುದರಿಂದ ಬುದ್ದಿ ಮತ್ತಷ್ಟು ಚುರುಕಾಗುತ್ತದೆ. ಇದರ ಜತೆಗೆ ತಾರ್ಖಿಕ ಶಕ್ತಿಯೂ ಬೆಳೆಯುತ್ತದೆ. ಮಕ್ಕಳು ಚೆಸ್ ಆಡುವುದರಿಂದ ಮುಂದೆ ಅವರು ಒಳ್ಳೆಯ ರೀತಿಯಲ್ಲಿ ತಮಗೆದುರಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ನಿಪುಣರಾಗುತ್ತಾರೆ. ಕಳೆದ ಎಂಟು ವರ್ಷಗಳಲ್ಲಿ ಚೆಸ್ ಕ್ಷೇತ್ರದಲ್ಲಿ ಭಾರತವು ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

44ನೇ ಚೆಸ್‌ ಒಲಿಂಪಿಯಾಡ್‌ (Chess Olympiad) ಟೂರ್ನಿಯಲ್ಲಿ ಸುಮಾರು 188 ದೇಶಗಳ 2000ಕ್ಕೂ ಅಧಿಕ ಚೆಸ್ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಇದುವರೆಗೂ ಒಮ್ಮೆಯೂ ಟಾರ್ಚ್ ರಿಲೇ ನಡೆದಿರಲಿಲ್ಲ. ಫಿಡೆ(ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್) ಮೊದಲ ಬಾರಿಗೆ ಭಾರತದಲ್ಲಿ ಟಾರ್ಚ್ ರಿಲೇ ಆರಂಭಿಸಲು ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಚೊಚ್ಚಲ ಬಾರಿಗೆ ಟಾರ್ಚ್ ರಿಲೇಯು ಭಾರತದ ಸುಮಾರು 75 ನಗರಗಳಲ್ಲಿ ಸಂಚರಿಸಲಿದೆ. ಟಾರ್ಚ್ ರಿಲೇಯು ಎಲ್ಲೆಲ್ಲಿ ಸಂಚರಿಸಲಿದೆ ಎನ್ನುವ ಹಾದಿಯನ್ನು ಅಖಿಲ ಭಾರತ ಚೆಸ್ ಫೆಡರೇಷನ್ ಶುಕ್ರವಾರವಷ್ಟೇ ಅನಾವರಣ ಮಾಡಿತ್ತು. 

ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್(ಫಿಡೆ) ಒಲಿಂಪಿಕ್ಸ್ ಮಾದರಿಯಲ್ಲಿ ಟಾರ್ಚ್ ರಿಲೇ ಸಂಪ್ರದಾಯವನ್ನು ತನ್ನ ಚೆಸ್ ಒಲಿಂಪಿಯಾಡ್‌ನಲ್ಲಿ ಆರಂಭಿಸಲು ಈ ವರ್ಷ ತೀರ್ಮಾನಿಸಿದೆ. ಇನ್ನು ಮುಂದೆ ಪ್ರತಿ ಚೆಸ್ ಒಲಿಂಪಿಯಾಡ್ ಆರಂಭವಾಗುವ ಮುನ್ನ ಭಾರತದಿಂದಲೇ ಟಾರ್ಚ್ ರಿಲೇ ಹೊರಡಲಿದೆ. ಚೆಸ್ ಎನ್ನುವ ಕ್ರೀಡೆ ಭಾರತದಲ್ಲೇ ಹುಟ್ಟಿದ್ದರಿಂದ ಈ ತೀರ್ಮಾನವನ್ನು ತೆಗೆದುಕೊಂಡಿದೆ ಫಿಡೆ. ಚೆಸ್ ಒಲಿಂಪಿಯಾಡ್ ಕ್ರೀಡಾಜ್ಯೋತಿಯು ರಾಷ್ಟ್ರರಾಜಧಾನಿ ನವದೆಹಲಿಯಿಂದ ಆರಂಭವಾಗಿ ದೇಶದ ಸುಮಾರು 75 ನಗರಗಳಲ್ಲಿ ಸಂಚರಿಸಿ ಜುಲೈ 27ರಂದು ತಮಿಳುನಾಡಿನ ಮಹಾಬಲಿಪುರಂಗೆ ತಲುಪಲಿದೆ. ಚೆಸ್ ಒಲಿಂಪಿಯಾಡ್ ಟಾರ್ಚ್‌ ರಿಲೇ ಲೇಹ್, ಶ್ರೀನಗರ, ಜೈಪುರ, ಸೂರತ್, ಮುಂಬೈ, ಭೂಪಾಲ್, ಪಾಟ್ನಾ, ಕೋಲ್ಕತಾ, ಹೈದರಾಬಾದ್, ಬೆಂಗಳೂರು, ತ್ರಿಶೂರ್, ಪೋರ್ಟ್‌ಬ್ಲೇರ್, ಕನ್ಯಾಕುಮಾರಿ ಸೇರಿದಂತೆ 75 ನಗರಗಳಲ್ಲಿ ಸಂಚರಿಸಲಿದೆ.

ಚೆಸ್‌ ಒಲಿಂಪಿಯಾಡ್‌ ಟಾರ್ಚ್‌ ರಿಲೇಗೆ ಪ್ರಧಾನಿ ಮೋದಿ ಚಾಲನೆ

ವಿಶ್ವದ ಅತಿದೊಡ್ಡ ಚೆಸ್ ಕ್ರೀಡಾಕೂಟ ಎನಿಸಿರುವ ಚೆಸ್ ಒಲಿಂಪಿಯಾಡ್‌ನ 44ನೇ ಆವೃತ್ತಿಗೆ ಚೆನ್ನೈ ಆತಿಥ್ಯವನ್ನು ವಹಿಸಿದ್ದು, ಜುಲೈ 28ರಿಂದ ಆಗಸ್ಟ್ 10ರವರೆಗೆ ಚೆನ್ನೈ ಸಮೀಪದ ಮಹಾಬಲಿಪುರಂ ಎಂಬಲ್ಲಿ ನಡೆಯಲಿದೆ. ಸುಮಾರು ನೂರು ವರ್ಷಗಳ ಇತಿಹಾಸವಿರುವ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟಕ್ಕೆ ಭಾರತ ಇದೇ ಮೊದಲ ಬಾರಿಗೆ ಆತಿಥ್ಯವನ್ನು ವಹಿಸುತ್ತಿದೆ. ಮುಂಬರುವ ಚೆಸ್ ಒಲಿಂಪಿಯಾಡ್‌ಗೆ ಈಗಾಗಲೇ 188 ದೇಶದ ಚೆಸ್‌ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.