ಮುಂಬೈ(ಡಿ. 11): ವಿರಾಟ್ ಕೊಹ್ಲಿ ಮತ್ತು ಜಯಂತ್ ಯಾದವ್ ಅವರ ಭರ್ಜರಿ ಬ್ಯಾಟಿಂಗ್'ನ ಸಹಾಯದಿಂದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದೆ. 231 ರನ್'ಗಳ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆಡುತ್ತಿರುವ ಇಂಗ್ಲೆಂಡ್ ತಂಡ ನಾಲ್ಕನೇ ದಿನಾಂತ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಇನ್ನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಇಂಗ್ಲೆಂಡ್ ಇನ್ನೂ 49 ರನ್ ಗಳಿಸಬೇಕಿದೆ.

ಇವತ್ತಿನ ದಿನದ ಹೈಲೈಟ್ ಎನಿಸಿದ್ದು ವಿರಾಟ್ ಕೊಹ್ಲಿ ಮತ್ತು ಜಯಂತ್ ಯಾದವ್ ಅವರ ಬ್ಯಾಟಿಂಗ್. ಕೊಹ್ಲಿ ಮೂರನೇ ದ್ವಿಶತಕ ಭಾರಿಸಿದರೆ, ಜಯಂತ್ ಚೊಚ್ಚಲ ಶತಕದ ಸಂಭ್ರಮ ಪಟ್ಟರು. ಕೊಹ್ಲಿ ಮತ್ತು ಜಯಂತ್ ನಡುವೆ 8ನೇ ವಿಕೆಟ್'ಗೆ 241 ರನ್ ದಾಖಲೆ ಜೊತೆಯಾಟ ಬಂದಿತು. 9ನೇ ಕ್ರಮಾಂಕದಲ್ಲಿ ಆಡಲು ಬಂದ ಜಯಂತ್ ಆ ಸ್ಥಾನದಲ್ಲಿ ಶತಕ ಭಾರಿಸಿದ ಮೊದಲ ಭಾರತೀಯನೆಂಬ ದಾಖಲೆಗೆ ಪಾತ್ರರಾದರು. ಇವರಿಬ್ಬರ ಬ್ಯಾಟಿಂಗ್ ಫಲವಾಗಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸಲ್ಲಿ 631 ರನ್ ಗಳಿಸಲು ಸಾಧ್ಯವಾಯಿತು.

ಇನ್ನು, ಇಂಗ್ಲೆಂಡ್'ನ ಎರಡನೇ ಇನ್ನಿಂಗ್ಸ್ ಆರಂಭದಲ್ಲೇ ಹಳಿತಪ್ಪಿತು. ಮೊದಲ ಇನ್ನಿಂಗ್ಸ್'ನ ಶತಕವೀರ ಕೀಟಾನ್ ಜೆನ್ನಿಂಗ್ಸ್ ಶೂನ್ಯ ಸುತ್ತಿ ಮೊದಲ ಓವರ್'ನಲ್ಲೇ ಔಟಾದರು. ಮೊಯೀನ್ ಅಲಿ ಕೂಡ ಶೂನ್ಯ ಸಂಪಾದನೆ ಮಾಡಿದರು. ಜೋ ರೂಟ್ ಮತ್ತು ಜಾನಿ ಬೇರ್'ಸ್ಟೋ ಮಾತ್ರ ಅರ್ಧಶತಕಗಳನ್ನು ಗಳಿಸಿ ಒಂದಷ್ಟು ಪ್ರತಿರೋಧ ತೋರಿದರು. ಒಂದು ಹಂತದಲ್ಲಿ 49 ರನ್'ಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ನಾಲ್ಕನೇ ದಿನವೇ ಆಲೌಟ್ ಆಗಿ ಇನ್ನಿಂಗ್ಸ್ ಸೋಲನುಭವಿಸುವ ಅಪಾಯದಲ್ಲಿತ್ತು. ಈ ಹಂತದಲ್ಲಿ ಕುಕ್ ಪಡೆಯ ನೆರವಿಗೆ ಬಂದ್ದು ಜೋ ರೂಟ್ ಮತ್ತು ಬೇರ್'ಸ್ಟೋ. ಇಬ್ಬರೂ 4ನೇ ವಿಕೆಟ್'ಗೆ 92 ರನ್ ಜೊತೆಯಾಟ ಅಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ರೂಟ್ ನಿರ್ಗಮನದ ಬಳಿಕ ಬೆನ್ ಸ್ಟೋಕ್ಸ್ ಮತ್ತು ಜೇಕ್ ಬಾಲ್ ಕೂಡ ಬೇಗನೇ ಪೆವಿಲಿಯನ್'ಗೆ ಮರಳಿದರು.

ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ಪಿಚ್ ತೀವ್ರತರವಾಗಿ ಟರ್ನ್ ಆಗುವ ಸಾಧ್ಯತೆ ಇದೆ. ಭಾರತಕ್ಕೆ ಇನ್ನಿಂಗ್ಸ್ ಗೆಲುವು ಲಭ್ಯವಾಗುತ್ತಾ ಎಂದು ನಾಳೆ ಕಾದು ನೋಡಬೇಕು.

ಸ್ಕೋರು ವಿವರ(4ನೇ ದಿನ):

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 130.1 ಓವರ್ 400 ರನ್ ಆಲೌಟ್
(ಕೀಟಾನ್ ಜೆನ್ನಿಂಗ್ಸ್ 112, ಜೋಸ್ ಬಟ್ಲರ್ 76, ಮೊಯೀನ್ ಅಲಿ 50, ಅಲಸ್ಟೇರ್ ಕುಕ್ 46, ಬೆನ್ ಸ್ಟೋಕ್ಸ್ 31, ಜೇಕ್ ಬಾಲ್ 31 ರನ್ - ಆರ್.ಅಶ್ವಿನ್ 112/6, ರವೀಂದ್ರ ಜಡೇಜಾ 109/4)

ಭಾರತ ಮೊದಲ ಇನ್ನಿಂಗ್ಸ್ 182.3 ಓವರ್ 631 ರನ್ ಆಲೌಟ್
(ವಿರಾಟ್ ಕೊಹ್ಲಿ 235, ಮುರಳಿ ವಿಜಯ್ 136, ಜಯಂತ್ ಯಾದವ್ 104, ಚೇತೇಶ್ವರ್ ಪೂಜಾರ 47, ರವೀಂದ್ರ ಜಡೇಜಾ 25, ಕೆಎಲ್ ರಾಹುಲ್ 24 ರನ್ - ಅದಿಲ್ ರಷೀದ್ 192/4, ಜೋ ರೂಟ್ 31/2, ಮೊಯೀನ್ ಅಲಿ 174/2)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 47.3 ಓವರ್ 182/6
(ಜೋ ರೂಟ್ 77, ಜಾನಿ ಬೇರ್'ಸ್ಟೋ ಅಜೇಯ 50, ಅಲಸ್ಟೇರ್ ಕುಕ್ 18, ಬೆನ್ ಸ್ಟೋಕ್ಸ್ 18 ರನ್ - ಆರ್.ಅಶ್ವಿನ್ 49/2, ರವೀಂದ್ರ ಜಡೇಜಾ 58/2)