Asianet Suvarna News Asianet Suvarna News

ಮೂರೇ ದಿನಕ್ಕೆ ಆಟ ಮುಗಿಸಿದ ಟೀಂ ಇಂಡಿಯಾ; ಲಂಕಾ ದಹನ ಮಾಡಿದ ಕೊಹ್ಲಿ ಬಾಯ್ಸ್

ಟೀಂ ಇಂಡಿಯಾ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಇನ್ನೂ ಟೂರ್ನಿಯಲ್ಲಿ 2 ಶತಕ ಸಿಡಿಸಿ ಶಿಖರ್ ಧವನ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

India clinch historic series whitewash

ಪಲ್ಲೆಕೆಲೆ(ಆ.14): ಟೆಸ್ಟ್ ಸರಣಿಯುದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಂಘಟಿತ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿಯನ್ನು ಜಯಿಸುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಐದು ದಿನಗಳ ಪಂದ್ಯದಲ್ಲಿ ಲಂಕಾದ ಯಾವುದೇ ಪ್ರತಿರೋಧವಿಲ್ಲದೇ ಮೂರೇ ದಿನಕ್ಕೆ ಟೀಂ ಇಂಡಿಯಾ ಎದುರು ಮಂಡಿಯೂರಿದೆ.

ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ಮೊಹಮ್ಮದ್ ಶಮಿಯ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಶ್ರೀಲಂಕಾ ಎರಡನೇ ಇನಿಂಗ್ಸ್'ನಲ್ಲಿ 181 ರನ್'ಗಳಿಗೆ ಸರ್ವಪತನ ಕಂಡಿದೆ. ಆ ಮೂಲಕ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 171 ರನ್'ಗಳ ಜಯಭೇರಿ ಬಾರಿಸಿದೆ. ಮೊದಲ ಇನಿಂಗ್ಸ್'ನಲ್ಲಿ 135 ರನ್'ಗಳಿಗೆ ಆಲೌಟ್ ಆಗಿ ಫಾಲೋ ಆನ್'ಗೆ ಸಿಲುಕಿದ್ದ ಶ್ರೀಲಂಕಾ ಎರಡನೇ ಇನಿಂಗ್ಸ್'ನಲ್ಲೂ ಎರಡನೇ ದಿನದಾಟದ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

19 ರನ್'ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಚಾಂಡಿಮಲ್ ಪಡೆಗೆ ಅಶ್ವಿನ್ ಮೊದಲ ಶಾಕ್ ನೀಡಿದರು. 16 ರನ್ ಗಳಿಸಿ ಆಡುತ್ತಿದ್ದ ಕರುಣರತ್ನೆಗೆ ಆಫ್'ಸ್ಪಿನ್ನರ್ ಪೆವಿಲಿಯನ್ ಹಾದಿ ತೋರಿಸಿದರು. ಇದಾದ ಕೆಲಹೊತ್ತಿನಲ್ಲೇ ನೈಟ್ ವಾಚ್'ಮನ್ ಪುಷ್ಪಕುಮಾರ್ ಕೂಡಾ ಶಮಿಗೆ ವಿಕೆಟ್ ಒಪ್ಪಿಸಿ ಕರುಣರತ್ನೆಯನ್ನು ಹಿಂಬಾಲಿಸಿದರು. 39 ರನ್'ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಲಂಕಾಗೆ ಆ್ಯಂಜಲೋ ಮ್ಯಾಥ್ಯೂಸ್ ಹಾಗೂ ನಾಯಕ ದಿನೇಶ್ ಚಾಂಡಿಮಲ್ ಅಲ್ಪ ಚೇತರಿಕೆ ನೀಡಲು ಯತ್ನಿಸಿದರು. 5ನೇ ವಿಕೆಟ್'ಗೆ ಈ ಜೋಡಿ 63ರನ್'ಗಳ ಜತೆಯಾಟವಾಡಿತು. ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಚಾಂಡಿಮಲ್'ಗೆ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಶಾಕ್ ನೀಡಿದರು. ಚಾಂಡಿಮಲ್ ಔಟ್ ಆಗುತ್ತಿದ್ದಂತೆ ದಿಢೀರ್ ಕುಸಿತ ಕಂಡ 166 ರನ್'ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ದಿಟ್ಟವಾಗಿ ಬ್ಯಾಟಿಂಗ್ ನಡೆಸಿದ ನಿರ್ಶೋನ್ ಡಿಕ್'ವೆಲ್ಲಾ 41ರನ್ ಬಾರಿಸಿ ಉಮೇಶ್ ಯಾದವ್'ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಶ್ರೀಲಂಕಾ 181 ರನ್'ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.

ಭಾರತ ಪರ ಅಶ್ವಿನ್ 4 ವಿಕೆಟ್ ಕಬಳಿಸಿದರೆ, ಶಮಿ 3, ಉಮೇಶ್ ಯಾದವ್ 2 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಹಂಚಿಕೊಂಡರು. ಟೀಂ ಇಂಡಿಯಾ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಇನ್ನೂ ಟೂರ್ನಿಯಲ್ಲಿ 2 ಶತಕ ಸಿಡಿಸಿ ಶಿಖರ್ ಧವನ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್:

ಭಾರತ

ಮೊದಲ ಇನಿಂಗ್ಸ್: 487/10

ಶಿಖರ್ ಧವನ್ : 119

ಹಾರ್ದಿಕ್ ಪಾಂಡ್ಯ : 108

ಲಕ್ಷಣ್ ಸಂದಕನ್ : 132/5

ಶ್ರೀಲಂಕಾ:

ಮೊದಲ ಇನಿಂಗ್ಸ್ : 135/10

ದಿನೇಶ್ ಚಾಂಡಿಮಲ್ : 48

ನಿರ್ಶೋನ್ ಡಿಕ್'ವೆಲ್ಲಾ : 29

ಕುಲ್ದೀಪ್ ಯಾದವ್ : 40/4  

ಶ್ರೀಲಂಕಾ ದ್ವಿತೀಯ ಇನಿಂಗ್ಸ್: 181/10

ಡಿಕ್'ವೆಲ್ಲಾ : 41

ಚಾಂಡಿಮಲ್ : 36

ಅಶ್ವಿನ್ : 68/4

ಫಲಿತಾಂಶ: ಭಾರತಕ್ಕೆ ಇನಿಂಗ್ಸ್ ಹಾಗೂ 171 ರನ್'ಗಳ ಜಯ; 3-0 ಅಂತರದಲ್ಲಿ ಸರಣಿ ಕ್ಲೀನ್'ಸ್ವೀಪ್

Follow Us:
Download App:
  • android
  • ios