ಮಿಥಾಲಿ ರಾಜ್ ಪಡೆ ಈಗಾಗಲೇ ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆದಿದೆ. ಹೀಗಾಗಿ ಇದು ಔಪಚಾರಿಕ ಪಂದ್ಯವಾಗಿತ್ತು.

ಕೊಲಂಬೊ(ಫೆ.19): ಭಾರತ ಸ್ಟಾರ್ ಸ್ಪಿನ್ನರ್ ಏಕ್ತಾ ಬಿಶ್ಟ್ (8ಕ್ಕೆ 5) ಅವರ ಅದ್ಭುತ ಸ್ಪಿನ್ ಮೋಡಿಗೆ ಮರುಳಾದ ಪಾಕಿಸ್ತಾನ ತಂಡ, 2017ರ ವನಿತೆಯರ ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ವಿರುದ್ಧ 7 ವಿಕೆಟ್‌'ಗಳ ಅಂತರದಲ್ಲಿ ಸೋಲು ಕಂಡಿದೆ. ಇದರೊಂದಿಗೆ ಭಾರತ ತಂಡ ಟೂರ್ನಿಯ ಫೈನಲ್‌'ಗೇರಿದ್ದು ಸತತ ಏಳು ಗೆಲುವಿನೊಂದಿಗೆ ಅಜೇಯವಾಗಿ ಉಪಾಂತ್ಯಕ್ಕೆ ಲಗ್ಗೆಯಿಟ್ಟಿದೆ. ಮಿಥಾಲಿ ರಾಜ್ ಪಡೆ ಈಗಾಗಲೇ ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆದಿದೆ. ಹೀಗಾಗಿ ಇದು ಔಪಚಾರಿಕ ಪಂದ್ಯವಾಗಿತ್ತು.

ಇಲ್ಲಿನ ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 43.4 ಓವರ್‌'ಗಳಲ್ಲಿ ಕೇವಲ 67ರನ್‌'ಗಳಿಸಿದೆ. ನಂತರ ಬ್ಯಾಟಿಂಗ್ ಮಾಡಿದ ಭಾರತ ತಂಡ 22.3 ಓವರ್‌'ಗಳಲ್ಲಿ 3 ವಿಕೆಟ್ 70ರನ್‌'ಗಳಿಸಿ ಗೆಲುವು ಸಾಧಿಸಿತು.

ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊನಾ ಮೆಶ್ರಾಮ್ (9)ರನ್‌'ಗಳಿಸಿ ಮೊದಲ ವಿಕೆಟ್ ರೂಪದಲ್ಲಿ ಔಟ್ ಆದರು. ಬಳಿಕ ದೇವಿಕಾ ವೈದ್ಯ(3) ಕೂಡ ಮೆಶ್ರಾಮ್ ಬೆನ್ನಿಗೆ ಪೆವಿಲಿಯನ್ ಹಾದಿ ಹಿಡಿದರು. 23ರನ್‌'ಗಳಿಗೆ 2 ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟದಲ್ಲಿ ಸಿಲುಕಿತ್ತು. ಈ ವೇಳೆ ಆರಂಭಿಕ ಆಟಗಾರ್ತಿ ದೀಪ್ತಿ ಶರ್ಮ ಜತೆಯಾದ ಹರ್ಮನ್‌ ಪ್ರೀತ್ ಕೌರ್ ನಿಧಾನವಾದ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. 35 ಎಸೆತಗಳಲ್ಲಿ 2 ಬೌಂಡರಿ, 1ಸಿಕ್ಸರ್ ಸಹಿತ 24 ರನ್‌'ಗಳಿಸಿದ್ದ ಹರ್ಮನ್, ಪಾಕ್‌'ನ ಸಾದಿಯಾ ಯುಸೂಫ್ ಬೌಲಿಂಗ್‌'ನಲ್ಲಿ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಭಾರತ ಜಯದ ಸನಿಹ ಬಂದಿತ್ತು. ಬಳಿಕ ವೇದಾ ಕೃಷ್ಣಮೂರ್ತಿ 4 ಮತ್ತು ದೀಪ್ತಿ 29 ರನ್‌'ಗಳಿಸಿ ಅಜೇಯರಾಗುಳಿಯುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಎಡಗೈ ಸ್ಪಿನ್ನರ್ ಏಕ್ತಾ ಬಿಶ್ಟ್ ಸ್ಪಿನ್ ಮೋಡಿಗೆ ಸಾನಾ ಮಿರ್ ಪಡೆ ತತ್ತರಿಸಿತು. 43.4 ಓವರ್‌'ಗಳ ಕಾಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 67 ರನ್‌'ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಪಾಕ್ ಪರ ಆರಂಭಿಕ ಆಟಗಾರ್ತಿ ಆಯೇಷಾ (19), ಮಧ್ಯಮ ಕ್ರಮಾಂಕದಲ್ಲಿ ಬಿಸ್ಮಾ ಮಹರೂಫ್ (13) ರನ್ ಹೊರತುಪಡಿಸಿದರೆ ಇನ್ನುಳಿದ ಆಟಗಾರ್ತಿಯರು ಒಂದಂಕಿ ಮೊತ್ತ ದಾಟಲಿಲ್ಲ. ಭಾರತ ತಂಡದ ಬೌಲರ್‌'ಗಳು ಇತರೆ ರನ್‌'ಗಳ ರೂಪದಲ್ಲಿ 24ರನ್‌'ಗಳನ್ನು ನೀಡಿದ್ದೆ ಹೆಚ್ಚಾಗಿತ್ತು. ಭಾರತದ ಪರ ಏಕ್ತಾ ಬಿಶ್ಟ್ 5, ಶಿಖಾ ಪಾಂಡೆ 2, ದೀಪ್ತಿ ಶರ್ಮ, ದೇವಿಕಾ ಮತ್ತು ಕೌರ್ ತಲಾ 1 ವಿಕೆಟ್ ಪಡೆದರು.

ಸಂಕ್ತಿಪ್ತ ಸ್ಕೋರ್

ಪಾಕಿಸ್ತಾನ : 67/10

(ಆಯೇಷಾ 19, ಬಿಸ್ಮಾ 13, ಏಕ್ತಾ ಬಿಶ್ಟ್ 8ಕ್ಕೆ 5)

ಭಾರತ : 70/3

(ದೀಪ್ತಿ ಅಜೇಯ 29, ಹರ್ಮನ್‌ಪ್ರೀತ್ 24, ಸಾದಿಯಾ 19ಕ್ಕೆ 2)

ಫಲಿತಾಂಶ: ಭಾರತಕ್ಕೆ 7 ವಿಕೆಟ್‌ಗಳ ಜಯ

ಪಂದ್ಯಶ್ರೇಷ್ಠ: ಏಕ್ತಾ ಬಿಶ್ಟ್ (ಭಾರತ)