ಬಾಂಗ್ಲಾದೇಶ ನೀಡಿದ್ದ 265 ರನ್‌ಗಳ ಸಾಧಾರಣ ಗುರಿಯನ್ನು ಕೇವಲ 1 ವಿಕೆಟ್ ಕಳೆದುಕೊಂಡು ಕೊಹ್ಲಿ ಪಡೆ ಗೆಲುವಿನ ನಗೆ ಬೀರಿತು. ಈ ಮೂಲಕ ಭಾರತ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಹಿರಿಮೆಗೆ ಪಾತ್ರವಾಯಿತು.
ಬರ್ಮಿಂಗ್'ಹ್ಯಾಮ್(ಜೂ.15): ರೋಹಿತ್ ಶರ್ಮಾ ಸ್ಫೋಟಕ ಶತಕ ಹಾಗೂ ಟೀಂ ಇಂಡಿಯಾ ಬೌಲರ್'ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ಮಣಿಸಿದ ಹಾಲಿ ಚಾಂಪಿಯನ್ ಮತ್ತೊಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಎಜ್'ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 9 ವಿಕೆಟ್'ಗಳ ಭರ್ಜರಿ ಗೆಲುವು ದಾಖಲಿಸಿತು.
ಬಾಂಗ್ಲಾದೇಶ ನೀಡಿದ್ದ 265 ರನ್ಗಳ ಸಾಧಾರಣ ಗುರಿಯನ್ನು ಕೇವಲ 1 ವಿಕೆಟ್ ಕಳೆದುಕೊಂಡು ಕೊಹ್ಲಿ ಪಡೆ ಗೆಲುವಿನ ನಗೆ ಬೀರಿತು. ಈ ಮೂಲಕ ಭಾರತ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಹಿರಿಮೆಗೆ ಪಾತ್ರವಾಯಿತು.
ಮೊದಲ ವಿಕೆಟ್'ಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ 87 ರನ್ ಜೊತೆಯಾಟವಾಡಿದರು. ಕೇವಲ 4ರನ್'ಗಳ ಅಂತರದಲ್ಲಿ ಅರ್ಧಶತಕ ತಪ್ಪಿಸಿಕೊಂಡ ಧವನ್, ಟೂರ್ನಿಯಲ್ಲಿ ಗರಿಷ್ಟ ರನ್ ದಾಖಲಿಸಿದ ಆಟಗಾರ ಎನಿಸಿಕೊಂಡರು.
ಇನ್ನು 2ನೇ ವಿಕೆಟ್'ಗೆ ರೋಹಿತ್ ಜತೆ ಇನಿಂಗ್ಸ್ ಕಟ್ಟಿದ ನಾಯಕ ವಿರಾಟ್ ಕೊಹ್ಲಿ ಮುರಿಯದ 178ರನ್'ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾವನ್ನು ಫೈನಲ್'ಗೆ ಕೊಂಡ್ಯೋಯ್ದರು.
ರೋಹಿತ್ ಏಕದಿನ ಕ್ರಿಕೆಟ್'ನಲ್ಲಿ 11ನೇ ಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ 96 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ಮೊದಲ ಓವರ್'ನಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಕಳೆದುಕೊಂಡಿತು. 19 ರನ್ ಗಳಿಸಿ ಶಬ್ಬೀರ್ ರಹಮಾನ್ ಔಟಾದಾಗ ತಂಡದ ಮೊತ್ತ 31 ರನ್ಗೆ 2 ವಿಕೆಟ್.
ಆದರೆ ಮೂರನೇ ವಿಕೆಟ್'ಗೆ ಜತೆಯಾದ ತಮೀಮ್ ಇಕ್ಬಾಲ್(70) ಹಾಗೂ ಮುಷ್ಫಿಕರ್ ರಹೀಮ್(61) ತಂಡಕ್ಕೆ ಉತ್ತಮ ಜತೆಯಾಟ ನೀಡಿದರು. ಟೀಂ ಇಂಡಿಯಾದ ಪ್ರಮುಖ ಬೌಲರ್'ಗಳನ್ನು ಮನಬಂದಂತೆ ಥಳಿಸಿದ ಈ ಜೋಡಿ ತಂಡವನ್ನು ಸಂಕಷ್ಟದಿಂದ ಮೇಲೆತ್ತಿತು. ಈ ವೇಳೆ ಬೌಲಿಂಗ್ ಬದಲಾವಣೆ ಮಾಡಿದ ಕೊಹ್ಲಿ ತಂತ್ರ ಫಲಿಸಿತು. ಕೇದಾರ್ ಜಾದವ್ ಸ್ಪಿನ್ ಮೋಡಿಗೆ ಈ ಇಬ್ಬರು ಪೆವಿಲಿಯನ್ ಸೇರಿದರು. ಆನಂತರ ಯಾವೊಬ್ಬ ಬಾಂಗ್ಲಾ ಬ್ಯಾಟ್ಸ್'ಮನ್ ನೆಲಕಚ್ಚಿ ಆಡಲು ಪ್ರಯತ್ನಿಸಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 264ರನ್ ಕಲೆಹಾಕಿತು.
ಟೀಂ ಇಂಡಿಯಾ ಪರ ಭುವಿ, ಬುಮ್ರಾ ಹಾಗೂ ಜಾಧವ್ ತಲಾ ಎರಡು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.
ಇನ್ನು ಜೂನ್ 18ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಟೀಂ ಇಂಡಿಯಾವು ನೆರೆಯ ಪಾಕಿಸ್ತಾನವನ್ನು ಎದುರಿಸಲಿದೆ.
