ಮುಂಬೈ(ಅ.23): ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದೀಗ 2ನೇ ಏಕದಿನ ಪಂದ್ಯಕ್ಕೆ ಅಂತಿಮ ಕಸರತ್ತು ನಡೆಸುತ್ತಿದೆ. ಇತ್ತ ಮುಂಬೈನ ಬ್ರೇಬೋರ್ನ್ ಕ್ರೀಡಾಂಗಣ 4ನೇ ಏಕದಿನ ಪಂದ್ಯ ಆಯೋಜಿಸಲು ಸಿದ್ಧತೆ ನಡೆಸಿದೆ.

ವಾಂಖೆಡೆ ಕ್ರೀಡಾಂಗಣದಿಂದ ಬ್ರೇಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿರುವ 4ನೇ ಏಕದಿನ ಪಂದ್ಯಕ್ಕೆ ಇದೀಗ ವಿಶೇಷ ಅತಿಥಿಯಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಗಮಿಸುತ್ತಿದ್ದಾರೆ. ಈಗಾಗಲೇ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(ಸಿಸಿಐ) ಸಚಿನ್ ತೆಂಡೂಲ್ಕರ್‍‌ಗೆ ಆಹ್ವಾನ ನೀಡಿದೆ. 

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯಕ್ಕೆ, ಸಚಿನ್ ತೆಂಡೂಲ್ಕರ್ ಗಂಟೆ ಬಾರಿಸೋ ಮೂಲಕ ಚಾಲನೆ ನೀಡಲಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿರುವ ಈ ಪದ್ದತಿಯನ್ನ ಬ್ರೆಬೋರ್ನ್ ಕ್ರೀಡಾಂಗಣ ಅಳವಡಿಸಿಕೊಂಡಿತ್ತು. ಇದೀಗ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲೂ ಇದೇ ಪದ್ದತಿ ಅನುಸರಿಸಲಾಗುತ್ತಿದೆ.

ಸಚಿನ್ ತೆಂಡೂಲ್ಕರ್ ಹಾಗೂ ಬ್ರೆಬೋರ್ನ್ ಕ್ರೀಡಾಂಗಣದ ಸಂಬಂಧ ಇಂದು ನಿನ್ನೆಯದಲ್ಲ. ಸಚಿನ್‌ಗೆ 15 ವರ್ಷ ವಯಸ್ಸಿರುವಾಗಲೇ ನಮ್ಮ ಎಲ್ಲಾ ನಿಯಮಗಳನ್ನ ಮೀರಿ ಸಚಿನ್‌ಗೆ ಸದಸ್ಯತ್ವ ನೀಡಿದ್ದೇವೆ. ಇದೀಗ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಇದೇ ಮೈದಾನದಲ್ಲಿ ಆಡುತ್ತಿದ್ದಾರೆ ಎಂದು ಸಿಸಿಐ ಹೇಳಿದೆ.