ವಿಶಾಖಪಟ್ಟಣ(ಅ.24): ಏಷ್ಯನ್ ಚಾಂಪಿಯನ್ ಭಾರತ, ಬುಧವಾರ ವಿಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯವನ್ನಾಡಲಿದೆ. ಸರಣಿಯ ಮೊದಲ ಪಂದ್ಯದಲ್ಲಿ
8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಆತಿಥೇಯ ಭಾರತ, 2ನೇ ಪಂದ್ಯದಲ್ಲಿ ಜಯ ಪಡೆಯುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಇಲ್ಲಿನ ಡಾ. ವೈ.ಎಸ್. ರಾಜಶೇಖರ ರೆಡ್ಡಿ (ಎಸಿಎ-ವಿಡಿಸಿಎ) ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ವಿಂಡೀಸ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಈ ಸರಣಿ ಪೂರ್ವಭಾವಿ ತಯಾರಿಯಾಗಿದೆ. 

ವಿಶ್ವಕಪ್‌ಗೆ ಕೇವಲ 8 ತಿಂಗಳು ಬಾಕಿ ಇದ್ದು, ಮಹಾಸಮರಕ್ಕೆ ಸಜ್ಜಾಗಲು ಭಾರತಕ್ಕೆ ಕೇವಲ 17 ಪಂದ್ಯಗಳು ಸಿಗಲಿದೆ. ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸುವ ಅನಿವಾರ್ಯತೆ ಯಲ್ಲಿರುವ ಭಾರತ ತಂಡ, ಬಹುಶಃ 2ನೇ ಪಂದ್ಯದಲ್ಲಿ ಈ ಪ್ರಯೋಗಕ್ಕೆ ಇಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

ಆದರೆ ಈ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಭಾರತ ತಂಡ ಉತ್ತರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಕೂಡ ಎಚ್ಚರಿಕೆ ವಹಿಸಬೇಕಿದೆ. ಇನ್ನೂ ಮೊದಲ ಪಂದ್ಯದಲ್ಲಿ ಆಡಿದ್ದ 11ರ ಬಳಗವನ್ನೆ ಈ ಪಂದ್ಯದಲ್ಲಿ ಆಡಿಸುವ ಇರಾದೆ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರದ್ದಾಗಿದೆ.

ಬಲಾಢ್ಯ ಬ್ಯಾಟಿಂಗ್ ಪಡೆ: ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಶಿಖರ್ ಧವನ್ ವೈಫಲ್ಯ ಅನುಭವಿಸಿದ್ದು ಹೊರತುಪಡಿಸಿದರೆ,
ಬ್ಯಾಟಿಂಗ್‌ನಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ತೋರಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ವಿರಾಟ್ 107
ಎಸೆತಗಳಲ್ಲಿ 140 ರನ್ ಪೇರಿಸಿದ್ದರೆ, ರೋಹಿತ್ ಶರ್ಮಾ 117 ಎಸೆತಗಳಲ್ಲಿ 152 ರನ್ ಬಾರಿಸಿದ್ದರು.

ಇದರೊಂದಿಗೆ ವಿಂಡೀಸ್ ನೀಡಿದ್ದ 323 ರನ್‌ಗಳ ಗುರಿಯನ್ನು ಟೀಂ ಇಂಡಿಯಾ ಕೇವಲ 42.1 ಓವರ್ ಗಳಲ್ಲಿ ತಲುಪಿತ್ತು. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಅಬ್ಬರ, ಪ್ರವಾಸಿ ವಿಂಡೀಸ್‌ಗೆ ತಲೆನೋವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಭಾರತ ನೂತನ ಯೋಜನೆ ರೂಪಿಸುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ರಿಶಭ್ ಪಂತ್ ತಂಡದಲ್ಲಿದ್ದರೂ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಟೆಸ್ಟ್ ನಲ್ಲಿಅದ್ಭುತ ಪ್ರದರ್ಶನ ತೋರಿದ ಆಧಾರದ ಮೇಲೆ ಪಂತ್ ಏಕದಿನ ಸರಣಿಗಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೊನಚಾಗಬೇಕು ಭಾರತದ ಬೌಲಿಂಗ್: ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ದಾಂಡಿಗರು ಅದ್ಭುತ ಆಟ ಪ್ರದರ್ಶಿಸಿದ್ದರೂ, ಬೌಲರ್‌ಗಳು ದುಬಾರಿ
ಎನಿಸಿದ್ದರು. ಭಾರತದ ಬೌಲರ್‌ಗಳನ್ನು ನಿರಾಯಾಸವಾಗಿ ಎದುರಿಸಿದ ವಿಂಡೀಸ್ ದಾಂಡಿಗರು 300 ಪ್ಲಸ್ ರನ್ ಪೇರಿಸಿದ್ದರು. 

ವೇಗಿ ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಅನುಪಸ್ಥಿತಿಯಲ್ಲಿ ಮೊಹಮದ್ ಶಮಿ, ಉಮೇಶ್ ಯಾದವ್, ಖಲೀಲ್ ಅಹ್ಮದ್ ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ವಿಫಲರಾಗಿದ್ದರು. ಸದ್ಯ ವಿಂಡೀಸ್ ತಂಡ ಉತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಆತಿಥೇಯ ಭಾರತ ತಂಡ, ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ.

ಶಿಮ್ರೊನ್, ಪೊವೆಲ್ ಭರವಸೆ: ಮತ್ತೊಂದೆಡೆ ತಾರಾ ಬ್ಯಾಟ್ಸ್‌ಮನ್ ಗೈರು ಹಾಜರಿಯಲ್ಲಿ ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ವಿಂಡೀಸ್‌ನ ಯುವ
ಆಟಗಾರರು ಮಿಂಚಿನ ಪ್ರದರ್ಶನ ತೋರಿದ್ದರು. ಕೀರನ್ ಪೊವೆಲ್, ಶಿಮ್ರೊನ್ ಹೆಟ್‌ಮಯರ್, ನಾಯಕ ಜೇಸನ್ ಹೋಲ್ಡರ್, ದೇವೇಂದ್ರ ಬಿಶೂ,
ಕೀಮಾರ್ ರೋಚ್ ಫಾರ್ಮ್ ನಲ್ಲಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಕೂಡ ಒಶಾನೆ ಥಾಮಸ್, ಆ್ಯಶ್ಲೆ ನರ್ಸ್ ಪ್ರಾಬಲ್ಯ ಮೆರೆದು ಭಾರತಕ್ಕೆ ಸವಾಲಾಗುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ತಂಡಗಳು 
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ರಿಶಭ್ ಪಂತ್, ಎಂ.ಎಸ್.ಧೋನಿ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಉಮೇಶ್ ಯಾದವ್, ಮೊಹಮದ್ ಶಮಿ, ಖಲೀಲ್ ಅಹ್ಮದ್. 

ವಿಂಡೀಸ್: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯನ್ ಅಲೆನ್, ಆ್ಯಂಬ್ರಿಸ್, ಸ್ಯಾಮುಯಲ್ಸ್, ಬಿಶೂ, ಹೇಮ್‌ರಾಜ್, ಹೆಟ್ಮೇಯರ್, ಶಾಯ್ ಹೋಪ್, ಅಲ್ಜಾರಿ ಜೋಸೆಫ್, ಪೋವೆಲ್, ನರ್ಸ್, ಕೀಮೌ ಪೌಲ್, ರೋವ್ಮನ್, ರೋಚ್, ಒಶಾನೆ ಥಾಮಸ್, ಒಬೆಡ್ ಮೆಕೊಯ್

ಪಿಚ್ ರಿಪೋರ್ಟ್
ವಿಶಾಖಪಟ್ಟಣದ ಎಸಿಎ-ವಿಡಿಸಿಎ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿದೆ. ಆರಂಭದಲ್ಲಿ ವೇಗಿಗಳಿಗೆ ಸಹಕರಿಸಲಿದ್ದು, ಬಳಿಕ ತಿರುವು
ಪಡೆಯುವುದರಿಂದ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕ ಎನಿಸಲಿದೆ. 

ನೆಟ್ಸ್ ನಲ್ಲಿ ಬೌಲ್ ಮಾಡಿದ ವೇಗಿ ಇಶಾಂತ್:
ಗಾಯದ ಸಮಸ್ಯೆಗೆ ತುತ್ತಾಗಿದ್ದ ಟೀಂ ಇಂಡಿಯಾದ ಹಿರಿಯ ವೇಗಿ ಇಶಾಂತ್ ಶರ್ಮಾ ಮಂಗಳವಾರ ನೆಟ್ಸ್‌ನಲ್ಲಿ ಬೌಲ್ ಮಾಡಿದರು. ಇದರೊಂದಿಗೆ ತಾವು  ಚೇತರಿಸಿಕೊಳ್ಳುತ್ತಿರುವುದಾಗಿ ಪರೋಕ್ಷವಾಗಿ ಇಶಾಂತ್ ಸಂದೇಶ ರವಾನಿಸಿದರು. ಹಿಮ್ಮಡಿ ನೋವಿಗೆ ಗುರಿಯಾದ ಕಾರಣ ಇಶಾಂತ್ ಶರ್ಮಾ ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಿಂದ ಹೊರಗುಳಿಯಬೇಕಾಯಿತು. 

ಬಳಿಕ ವಿಶ್ರಾಂತಿ ಪಡೆದಿದ್ದ ಇಶಾಂತ್, ವಿಂಡೀಸ್ ವಿರುದ್ಧದ 2ನೇ ಏಕದಿನಕ್ಕೆ ಅಭ್ಯಾಸ ನಡೆಸುತ್ತಿದ್ದ ಟೀಂ ಇಂಡಿಯಾ ಆಟಗಾರರಿಗೆ ಅರ್ಧ ಗಂಟೆಗೂ ಅಧಿಕ ಕಾಲ ಬೌಲ್ ಮಾಡಿದರು. ಬಿಸಿಸಿಐ ಕೂಡ ಇಶಾಂತ್ ಬೌಲ್ ಮಾಡುತ್ತಿರುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ
ಪೋಸ್ಟ್ ಮಾಡಿದ್ದು, ಟ್ರ್ಯಾಕ್‌ಗೆ ಮರಳಿದ್ದಾರೆ ಎಂದು ಬರೆದಿತ್ತು