ಸೌತಾಂಪ್ಟನ್[ಆ.30]: ಟೀಂ ಇಂಡಿಯಾ ಬೌಲರ್’ಗಳ ಸಾಂಘಿತ ಪ್ರದರ್ಶನದಿಂದ ಇಂಗ್ಲೆಂಡ್ ತಂಡವನ್ನು ಕೇವಲ 246 ರನ್’ಗಳಿಗೆ ನಿಯಂತ್ರಿಸಿದ ಬಳಿಕ ಬ್ಯಾಟಿಂಗ್’ನಲ್ಲಿ ವಿಕೆಟ್ ನಷ್ಟವಿಲ್ಲದೇ 19 ರನ್ ಬಾರಿಸಿದೆ. ಈ ಮೂಲಕ ಆಂಗ್ಲರ ವಿರುದ್ಧದ ನಾಲ್ಕನೇ ಟೆಸ್ಟ್’ನ ಮೊದಲ ದಿನ ವಿರಾಟ್ ಕೊಹ್ಲಿ ಪಡೆ ಮೇಲುಗೈ ಸಾಧಿಸಿದೆ.

ಇಂಗ್ಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದ ಟೀಂ ಇಂಡಿಯಾ, ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು 19 ರನ್ ಗಳಿಸಿದೆ. ಕೆ.ಎಲ್ ರಾಹುಲ್ 11 ಹಾಗೂ ಧವನ್ 3 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿತು. ತಂಡದ ಮೊತ್ತ ಒಂದು ರನ್ ಗಳಿಸುತ್ತಿದ್ದಂತೆ ಮೊದಲ ವಿಕೆಟ್ ಕಳೆದುಕೊಂಡಿತು. ಆಬಳಿಕ ನಿರಂತರ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಒಂದು ಹಂತದಲ್ಲಿ 86 ರನ್’ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಮೊಯಿನ್ ಅಲಿ[40] ಹಾಗೂ ಸ್ಯಾಮ್ ಕುರ್ರಾನ್ ಆಸರೆಯಾದರು. 7ನೇ ವಿಕೆಟ್’ಗೆ ಈ ಜೋಡಿ 81 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿದಾಟಿಸಿತು. ಆ ಬಳಿಕ ಕೂಡಾ ಕೆಚ್ಚೆದೆಯ ಆಟವಾಡಿದ 20ರ ಹರೆಯದ ಕುರ್ರಾನ್ ಭರ್ಜರಿ 78 ರನ್ ಸಿಡಿಸುವ ಮೂಲಕ ತಂಡವನ್ನು 250ರ ಸಮೀಪ ಕೊಂಡ್ಯೊಯ್ದರು.

ಇನ್ನು ಭಾರತ ಪರ ಬುಮ್ರಾ 3, ಇಶಾಂತ್, ಶಮಿ, ಅಶ್ವಿನ್ ತಲಾ 2 ಹಾಗೂ ಪಾಂಡ್ಯ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 246/10
ಸ್ಯಾಮ್ ಕುರ್ರಾನ್: 78
ಬುಮ್ರಾ: 46/3

ಭಾರತ: 19/0
ರಾಹುಲ್: 13
[* ಮೊದಲ ದಿನದಾಟ ಮುಕ್ತಾಯಕ್ಕೆ]