ಸೌತಾಂಪ್ಟನ್[ಆ.30]: ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್’ನಲ್ಲಿ ವಿರಾಟ್ ಕೊಹ್ಲಿ ಪಡೆ ಮೇಲುಗೈ ಸಾಧಿಸಿದ್ದು ಎರಡನೇ ದಿನದ ಊಟದ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 100 ರನ್ ಬಾರಿಸಿದ್ದು, ಇನ್ನು ಕೇವಲ 146 ರನ್’ಗಳ ಹಿನ್ನಡೆಯಲ್ಲಿದೆ.

ಮೊದಲ ದಿನವೇ ಇಂಗ್ಲೆಂಡ್ ತಂಡವನ್ನು ಕೇವಲ 246 ರನ್’ಗಳಿಗೆ ಕಟ್ಟಿಹಾಕಿದ್ದ ಟೀಂ ಇಂಡಿಯಾ, ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್ ಬಾರಿಸಿತ್ತು. ಇನ್ನು ಎರಡನೇ ದಿನದಾಟ ಆರಂಭಿಸಿದ ಭಾರತ ತನ್ನ ಖಾತೆಗೆ ಇನ್ನು 18 ರನ್ ಸೇರಿಸುವಷ್ಟರಲ್ಲೇ ಆರಂಭಿಕ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ 19 ರನ್ ಬಾರಿಸಿ ಬ್ರಾಡ್’ಗೆ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲಿ ಟೀಂ ಇಂಡಿಯಾ 50 ರನ್ ಗಡಿ ಮುಟ್ಟಿತ್ತು. ಆದರೆ 18ನೇ ಓವರ್’ನ ಕೊನೆಯ ಎಸೆತದಲ್ಲಿ ಬ್ರಾಡ್ ಟೀಂ ಇಂಡಿಯಾದ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಅವರನ್ನು ಬಲಿ ಪಡೆದರು.

ಕೇವಲ 50 ರನ್’ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಆಸರೆಯಾಗಿದ್ದಾರೆ. ಮೂರನೇ ವಿಕೆಟ್’ಗೆ ಈ ಜೋಡಿ ಮುರಿಯದ 50 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 100 ರನ್’ಗೆ ಮುಟ್ಟಿಸಿದ್ದಾರೆ. ಪೂಜಾರ 28 ಹಾಗೂ ಕೊಹ್ಲಿ 25 ರನ್ ಬಾರಿಸಿದ್ದು ದೊಡ್ಡ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 246/10

ಭಾರತ: 100/2