ನವದೆಹಲಿ(ಮಾ.13): ಆಸ್ಪ್ರೇಲಿಯಾ ವಿರುದ್ಧ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ಗೆಲ್ಲಬೇಕಿದ್ದರೆ, ಮೊಹಾಲಿ ಪಂದ್ಯದಲ್ಲಿ ತೋರಿದ ಕಳಪೆ ಫೀಲ್ಡಿಂಗ್‌, ಬೌಲಿಂಗ್‌ ಪ್ರದರ್ಶನವನ್ನು ಮರೆತು ಕಣಕ್ಕಿಳಿಬೇಕಿದೆ. ಬುಧವಾರದ ಪಂದ್ಯ ವಿಶ್ವಕಪ್‌ಗೂ ಭಾರತ ತಂಡ ಆಡಲಿರುವ ಕೊನೆ ಏಕದಿನ ಪಂದ್ಯವಾಗಿದ್ದು, ಇಂಗ್ಲೆಂಡ್‌ಗೆ ವಿಮಾನ ಹತ್ತಲಿರುವ 15 ಆಟಗಾರರು ಯಾರಾರ‍ಯರು ಎನ್ನುವುದು ಬಹುತೇಕ ನಿರ್ಧಾರವಾಗಲಿದೆ.

3ನೇ ಪಂದ್ಯದಲ್ಲಿ ಭಾರತ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿ ಎಡವಟ್ಟು ಮಾಡಿಕೊಂಡಿತ್ತು. 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವ ಯೋಜನೆಯೂ ಕೈಹಿಡಿಯಲಿಲ್ಲ. ಪಿಚ್‌ ಹಾಗೂ ವಾತಾವರಣವನ್ನು ಅರಿಯುವುದರ ಜತೆ ಮೈದಾನದಲ್ಲಿ ತಾಂತ್ರಿಕವಾಗಿ ನಾಯಕ ವಿರಾಟ್‌ ಕೊಹ್ಲಿ ಹಲವು ತಪ್ಪುಗಳನ್ನು ಮಾಡುತ್ತಿದ್ದು, ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಮೊಹಾಲಿ ಪಂದ್ಯದಲ್ಲಿ ಎಂ.ಎಸ್‌.ಧೋನಿ ಅನುಪಸ್ಥಿತಿ ಬಹುವಾಗಿ ಕಾಡಿತು. ವಿರಾಟ್‌ ತಮ್ಮ ನಿರ್ಧಾರಗಳಲ್ಲಿ ಮತ್ತಷ್ಟು ಪರಿಪಕ್ವತೆ ಕಂಡುಕೊಳ್ಳಬೇಕಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ದೆಹಲಿ ಪಂದ್ಯ: ಟೀಂ ಇಂಡಿಯಾ ಮುಂದಿದೆ 3 ಸವಾಲು!

ಫಿರೋಜ್‌ ಶಾ ಕೋಟ್ಲಾ ಮೈದಾನದ ಪಿಚ್‌ ಸಾಮಾನ್ಯವಾಗಿ ನಿಧಾನಗತಿಯ ಪಿಚ್‌ ಆಗಿರಲಿದ್ದು, ಹೆಚ್ಚಿನ ಬೌನ್ಸ್‌ ಇರುವುದಿಲ್ಲ. ಹೀಗಾಗಿ ಟಾಸ್‌ ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿ ನಡೆದಿರುವ ಕೊನೆ 2 ಏಕದಿನ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿಲ್ಲ, ಆದರೆ ಟಿ20 ಪಂದ್ಯಗಳಲ್ಲಿ ರನ್‌ ಹೊಳೆ ಹರಿದಿದೆ. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ ಹಾಗೂ ರಿಷಭ್‌ ಪಂತ್‌ ಮೂವರೂ ದೆಹಲಿ ಆಟಗಾರರಾಗಿದ್ದು, ಇಲ್ಲಿನ ಪಿಚ್‌ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಲಿದ್ದಾರೆ. ಈ ಮೂವರಿಂದ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಇಂಡೋ-ಆಸಿಸ್ ಏಕದಿನ: ನಿರ್ಣಾಯಕ ಪಂದ್ಯಕ್ಕೆ ಹೇಗಿರಲಿದೆ ಕೊಹ್ಲಿ ಸೈನ್ಯ?

ಕಳೆದ ಕೆಲ ತಿಂಗಳುಗಳಿಂದ ರನ್‌ ಗಳಿಸಲು ತಿಣುಕಾಡುತ್ತಿದ್ದ ಧವನ್‌, ಮೊಹಲಿಯಲ್ಲಿ ಶತಕ ಬಾರಿಸಿ ಲಯಕ್ಕೆ ಮರಳಿದ್ದಾರೆ. ರೋಹಿತ್‌ ಶರ್ಮಾ ಕೂಡ ವಿಶ್ವಾಸ ಮರಳಿ ಪಡೆದಿದ್ದಾರೆ. ಕೆ.ಎಲ್‌.ರಾಹುಲ್‌ಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆ ಇದ್ದು, ಸ್ಥಾನ ಉಳಿಸಿಕೊಳ್ಳಬೇಕು ಎನ್ನುವುದನ್ನು ತಲೆಯಲ್ಲಿಟ್ಟುಕೊಂಡು ಆಡುವ ಬದಲು ತಮ್ಮ ನೈಜ ಆಟವಾಡಬೇಕಿದೆ. ಮೊಹಾಲಿ ಪಂದ್ಯದಲ್ಲಿ ರಾಹುಲ್‌ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಒತ್ತಡದೊಂದಿಗೆ ಬ್ಯಾಟ್‌ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣಿಸಿತ್ತು. ವಿಶ್ವಕಪ್‌ ತಂಡದಲ್ಲಿ ಮೀಸಲು ವಿಕೆಟ್‌ ಕೀಪರ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಿಷಭ್‌, ಬ್ಯಾಟಿಂಗ್‌ ಹಾಗೂ ಕೀಪಿಂಗ್‌ ಎರಡರಲ್ಲೂ ಸಾಧಾರಣ ಎನಿಸಿಕೊಂಡಿದ್ದಾರೆ.

ಕೋಟ್ಲಾ ಪಿಚ್‌ನ ಇತಿಹಾಸವನ್ನು ಗಮನಿಸಿದರೆ, ಮಣಿಕಟ್ಟು ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ದೊರೆಯಲಿದೆ. ಹೀಗಾಗಿ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ಇಬ್ಬರ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಲಿದೆ. ಜಸ್ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಲು ತಂಡ ಬಯಸಿದರೂ, ನಿರ್ಣಾಯಕ ಪಂದ್ಯಕ್ಕೆ ಪ್ರಮಖ ವೇಗಿಯನ್ನು ಕೈಬಿಡುವ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ. ಭುವನೇಶ್ವರ್‌ ಕುಮಾರ್‌ ಮೇಲೂ ಒತ್ತಡವಿದ್ದು, ಭಾರತ ತಂಡಕ್ಕೆ ಮತ್ತೊಮ್ಮೆ ಆಯ್ಕೆ ಗೊಂದಲ ಶುರುವಾಗಿದೆ.

ದಶಕದ ಬಳಿಕ ಆಸೀಸ್‌ಗೆ ಸರಣಿ?: 2009ರ ಬಳಿಕ ಭಾರತ ನೆಲದಲ್ಲಿ ಆಸ್ಪ್ರೇಲಿಯಾ ಏಕದಿನ ಸರಣಿ ಗೆದ್ದಿಲ್ಲ. ಆ್ಯರೋನ್‌ ಫಿಂಚ್‌ ಪಡೆ ಇತಿಹಾಸ ಬರೆಯಲು ಕಾತರಿಸುತ್ತಿದ್ದು, ಆ್ಯಸ್ಟನ್‌ ಟರ್ನರ್‌ರಂತಹ ಮ್ಯಾಚ್‌ ವಿನ್ನರ್‌ ಸಿಕ್ಕಿರುವುದು ತಂಡದ ಬಲ ಹೆಚ್ಚಿಸಿದೆ. ಉಸ್ಮಾನ್‌ ಖವಾಜ ಹಾಗೂ ಪೀಟರ್‌ ಹ್ಯಾಂಡ್ಸ್‌ಕಂಬ್‌ ಅತ್ಯುತ್ತಮ ಲಯದಲ್ಲಿದ್ದಾರೆ. ವಿಶ್ವಕಪ್‌ಗೂ ಮುನ್ನ ಆಸ್ಪ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ ಸರಣಿ ಆಡಲಿದೆಯಾದರೂ, ಭಾರತ ವಿರುದ್ಧ ಸರಣಿ ಗೆಲುವು ಹಾಲಿ ವಿಶ್ವ ಚಾಂಪಿಯನ್ನರ ಆತ್ಮವಿಶ್ವಾಸ ಇಮ್ಮಡಿಗೊಳಿಸಲಿದೆ.

ಕೋಟ್ಲಾದಲ್ಲಿ 25ನೇ ಏಕದಿನ: ದೆಹಲಿಯ ಫಿರೋಜ್‌ ಶಾ ಕೋಟ್ಲಾ 25ನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. 1982ರಲ್ಲಿ ಇಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು. ಈ ಮೈದಾನದಲ್ಲಿ ಭಾರತ ಆಡಿರುವ 19 ಪಂದ್ಯಗಳಲ್ಲಿ 12ರಲ್ಲಿ ಗೆದ್ದು, 6ರಲ್ಲಿ ಸೋಲುಂಡಿದೆ. 1 ಪಂದ್ಯ ರದ್ದಾಗಿತ್ತು.

ಕೊನೆಯ 5 ಪಂದ್ಯಗಳ ಸರಣಿ!: 2020ರ ಮೇ ತಿಂಗಳಿಂದ ಐಸಿಸಿ ಏಕದಿನ ಲೀಗ್‌ ಆರಂಭಗೊಳ್ಳಲಿದ್ದು, ಎಲ್ಲಾ ದ್ವಿಪಕ್ಷೀಯ ಸರಣಿಗಳು ಕೇವಲ 3 ಪಂದ್ಯಗಳನ್ನು ಒಳಗೊಂಡಿರಲಿದೆ. ಹೀಗಾಗಿ ಭಾರತ-ಆಸ್ಪ್ರೇಲಿಯಾ ನಡುವಿನ ಕೊನೆ 5 ಪಂದ್ಯಗಳ ಸರಣಿ ಇದಾಗಲಿದೆ.

ಸಂಭವನೀಯ ತಂಡಗಳು

ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ(ನಾಯಕ), ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ವಿಜಯ್‌ ಶಂಕರ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಜಸ್ಪ್ರೀತ್‌ ಬುಮ್ರಾ.

ಆಸ್ಪ್ರೇಲಿಯಾ: ಉಸ್ಮಾನ್‌ ಖವಾಜ, ಆ್ಯರೋನ್‌ ಫಿಂಚ್‌, ಶಾನ್‌ ಮಾರ್ಷ್, ಪೀಟರ್‌ ಹ್ಯಾಂಡ್ಸ್‌ಕಂಬ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಆ್ಯಸ್ಟನ್‌ ಟರ್ನರ್‌, ಅಲೆಕ್ಸ್‌ ಕಾರ್ರಿ, ಪ್ಯಾಟ್‌ ಕಮಿನ್ಸ್‌, ನೇಥನ್‌ ಲಯನ್‌, ಜಾಯಿ ರಿಚರ್ಡ್‌ಸನ್‌, ಆ್ಯಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1