ನವದೆಹಲಿ(ಅ.06): ಭಾರತದ ಅಗ್ರ ಬಾಕ್ಸಿಂಗ್ ತಾರೆ ಮೇರಿ ಕೋಮ್ ತಮ್ಮ ಮಕ್ಕಳಿಗೆ ಬರೆದ ಪತ್ರವೊಂದರಲ್ಲಿ ತಾನೂ ವ್ಯಕ್ತಿಯೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದೆ ಎಂಬ ಅಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಲೆಟ್ಸ್ ಟಾಕ್ ಎಬೋಟ್ ರೇಪ್ ಎಂಬ ಸಾಮಾಜಿಕ ಪ್ರಚಾರ ಕಾರ್ಯಕ್ರಮದ ಭಾಗವಾಗಿರುವ ಮೇರಿ ಕೋಮ್ ತಮ್ಮ ಮಕ್ಕಳಿಗೆ ಬರೆದ ಪತ್ರದಲ್ಲಿ ತಾನೂ ಒಮ್ಮೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ತಿಳಿಸಿದ್ದಾರೆ.
'ನಾನು ಬೆಳಗ್ಗೆ 8.30ಕ್ಕೆ ತರಬೇತಿಗೆಂದು ಆಟೋರಿಕ್ಷಾದಲ್ಲಿ ಹೋಗುತ್ತಿದ್ದೆ. ಒಮ್ಮೆ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆಯೇ ನನ್ನ ಮೈ ಮೇಲೆ ಕೈಹಾಕಿದ. ನನಗೆ ತುಂಬ ಸಿಟ್ಟು ಬಂತು. ನಾನು ಆತನನ್ನು ಆಟೋದಿಂದ ಹೊರ ತಳ್ಳಿ ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈಗೆ ತೆಗೆದುಕೊಂಡೆ. ಆಗ ಆತ ತಪ್ಪಿಸಿಕೊಂಡು ಓಡಿಹೋದ. ಅದಾಗಲೇ ನಾನು ಕರಾಟೆ ಕಲಿತಿದ್ದರಿಂದ ನನಗೆ ಅದು ಸಹಾಯಕ್ಕೆ ಬಂತು' ಎಂದು ಐದು ಬಾರಿ ವಿಶ್ವಚಾಂಪಿಯನ್ ಆಗಿರುವ ಮೇರಿ ಕೋಮ್ ತಿಳಿಸಿದ್ದಾರೆ.
ನೀವು ಬೆಳೆದು ದೊಡ್ಡವರಾದ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ನೋಡಿದರೆ ತಕ್ಷಣ ಅವರ ನೆರವಿಗೆ ಹೋಗಿ ಎಂದು ತಮ್ಮ ಇಬ್ಬರು ಮಕ್ಕಳಿಗೆ(9 ವರ್ಷ, 3 ವರ್ಷ) ಮೇರಿ ಕೋಮ್ ಕಿವಿಮಾತು ಹೇಳಿದ್ದಾರೆ.
2012ರ ಲಂಡನ್ ಒಲಿಂಪಿಕ್'ನಲ್ಲಿ 51 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಕಂಚಿನ ಪದಕವನ್ನು ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
