ಬೆಂಗಳೂರು[ಮೇ.29]: ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿದ್ದು, ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ.
1975ರಿಂದ 2015ರವರಗೆ ಟೀಂ ಇಂಡಿಯಾ ಹಲವು ಏರು-ಪೇರುಗಳಿಗೆ ಸಾಕ್ಷಿಯಾಗಿದೆ. 1983ರಲ್ಲಿ ಕಪಿಲ್ ದೇವ್ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ವಿಶ್ವಕಪ್ ಜಯಿಸಿತ್ತು. ಇದೀಗ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಮತ್ತೊಮ್ಮೆ ವಿಶ್ವಕಪ್ ಗೆದ್ದು ಇತಿಹಾಸ ಬರೆಯಲು ಎದುರು ನೋಡುತ್ತಿದೆ.

ಈ ಸಂದರ್ಭದಲ್ಲಿ ಕಳೆದ 11 ವಿಶ್ವಕಪ್ ಆವೃತ್ತಿಗಳಲ್ಲಿ ಟೀಂ ಇಂಡಿಯಾ ಕಂಡ ಕೆಲವು ಮಧುರ ಹಾಗೆಯೇ ಮತ್ತೆ ಕೆಲವು ಕರಾಳ ಕ್ಷಣಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ಮಧುರ ಕ್ಷಣಗಳು:

* 1975ರಲ್ಲಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅತ್ಯಂತ ಶಿಸ್ತುಬದ್ಧ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಈಸ್ಟ್ ಆಫ್ರಿಕಾ ವಿರುದ್ಧ 12 ಓವರ್ ಮಾಡಿ 8 ಮೇಡನ್ ಸಹಿತ 6 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. [*12-08-06-1 ಆಗ ಏಕದಿನ ಪಂದ್ಯಗಳಲ್ಲಿ 60 ಓವರ್ ಮಾಡಲಾಗುತ್ತಿತ್ತು] 

* ಯಶ್‌ಪಾಲ್ ಶರ್ಮಾ ಬಾರಿಸಿದ 89 ರನ್ ನೆರವಿನಿಂದ 1983ರಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಗ್ರೂಪ್ ಹಂತದಲ್ಲೇ ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿತ್ತು. 

* 1983ರಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಬಾರಿಸಿದ 175 ರನ್ ಹಾಗೂ ವಿಶ್ವಕಪ್ ಫೈನಲ್ ನಲ್ಲಿ ಕಪಿಲ್ ವಿಂಡೀಸ್ ದೈತ್ಯ ಕ್ರಿಕೆಟಿಗ ವೀವ್ ರಿಚರ್ಡ್ಸನ್ ಅವರ ಕ್ಯಾಚ್ ಹಿಡಿದ್ದದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಲ್ಲಿ ಹಚ್ಚಹಸಿರಾಗಿ ಉಳಿದಿದೆ.

* 1987ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವೇಗಿ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ವಿಶ್ವದ ಬೌಲರ್ ಹೆಗ್ಗಳಿಕೆಗೆ ಚೇತನ್ ಶರ್ಮಾ ಭಾಜನರಾಗಿದ್ದರು.

* 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಆಲ್ರೌಂಡ್ ಪ್ರದರ್ಶನ, ಫೈನಲ್ ಪಂದ್ಯದಲ್ಲಿ ಗೌತಮ್ ಗಂಭೀರ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ದೇಶ ಖುಷಿಯ ಹೊನಲಿನಲ್ಲಿ ತೇಲುವಂತೆ ಮಾಡಿದ್ದು ಟೀಂ ಇಂಡಿಯಾದ ಮಧುರ ಕ್ಷಣಗಳಲ್ಲಿ ಒಂದು.

ಕರಾಳ ಕ್ಷಣ:

* 1975ರ ವಿಶ್ವಕಪ್ ಟೂರ್ನಿಯಲ್ಲಿ ಸುನಿಲ್ ಗವಾಸ್ಕರ್ 174 ಎಸೆತಗಳನ್ನು ಎದುರಿಸಿ ಅಜೇಯ 36 ರನ್ ಬಾರಿಸಿದ್ದು, ಭಾರತದ ಅತ್ಯಂತ ಕೆಟ್ಟ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ.

* 1996ರ ವಿಶ್ವಕಪ್ ಟೂರ್ನಿಯಲ್ಲಿ ಕೋಲ್ಕತಾದ ಈಡನ್ಗಾರ್ಡನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಆಘಾತಕಾರಿ ಸೋಲು, ವಿನೋದ್ ಕಾಂಬ್ಳಿ ಕಣ್ಣೀರಿಟ್ಟಿದ್ದು ಭಾರತದ ಕಹಿಘಟನೆಗಳಲ್ಲಿ ಒಂದು.

* 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಗಳ ಹೀನಾಯ ಸೋಲು ಕಂಡು ಲೀಗ್ ಹಂತದಲ್ಲೇ ಹೊರಬಿದ್ದಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಇಂದಿಗೂ ಮರೆತಿಲ್ಲ.