ಮಹಿಳಾ ಟಿ20 ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ
ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಮೊದಲ ಪಂದ್ಯದಲ್ಲೇ ಭಾರತ ಹಾಗೂ ನ್ಯೂಜಿಲೆಂಡ್ ತಂಡ ಹೋರಾಟ ನಡೆಸಲಿದೆ. ಹಾಗಾದರೆ ಟೂರ್ನಿ ಯಾವತ್ತು ಆರಂಭಗೊಳ್ಳಲಿದೆ? ಇಲ್ಲಿದೆ ವಿವರ
ದುಬೈ(ಜೂ.25): ಐಸಿಸಿ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ವೇಳಾ ಪಟ್ಟಿ ಪ್ರಕಟಗೊಂಡಿದೆ. ನವೆಂಬರ್ 9 ರಿಂದ 24ರ ವರೆಗೆ ನಡೆಯಲಿರುವ ಚುಟುಕು ವಿಶ್ವಕಪ್ ಸರಣಿಯಲ್ಲಿಒಟ್ಟು 23 ಪಂದ್ಯಗಳು ನಡೆಯಲಿದೆ.
ನವೆಂಬರ್ 9ರ ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಗಯಾನ, ಸೈಂಟ್ ಲೂಸಿಯಾ,ಆಂಟಿಗುವಾ ಹಾಗೂ ಬಾರ್ಬುಡಾದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿವೆ.
ಕಳೆದ ಬಾರಿಯ ಟಿ-ಟ್ವೆಂಟಿ ಪಂದ್ಯದಲ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ ಇಲ್ಲದ ಕಾರಣ ವಿವಾದಕ್ಕೂ ಕಾರಣವಾಗಿತ್ತು. ಹೀಗಾಗಿ ಇದೇ ಮೊದಲ ಬಾರಿಗೆ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಡಿಆರ್‌ಎಸ್ ಅಳವಡಿಸಲಾಗುತ್ತಿದೆ.
ಹಾಲಿಚಾಂಪಿಯನ್ ವೆಸ್ಟ್ಇಂಡೀಸ್ ತಂಡ ಮತ್ತೊಮ್ಮೆ ಪ್ರಶಸ್ತಿ ಗೆಲ್ಲೋ ವಿಶ್ವಾಸದಲ್ಲಿದ್ದರೆ, ಕಳೆದ ಬಾರಿ ಕೈತಪ್ಪಿದ ಚಾಂಪಿಯನ್ ಪಟ್ಟ ಗಳಿಸಿಕೊಳ್ಳಲು ಭಾರತ ಪ್ರಯತ್ನಿಸಲಿದೆ. ಟಿ-ಟ್ವೆಂಟಿ ವಿಶ್ವಕಪ್ ವೇಳಾ ಪಟ್ಟಿ ನಮಗೆ ಎಚ್ಚರಿಕೆಯ ಕರೆ ಗಂಟೆ. ಕಳೆದ ವರ್ಷ ನಾವು ಫೈನಲ್ ಪಂದ್ಯದಲ್ಲಿ ಎಡವಿದ್ದೇವು. ಆದರೆ ಈ ಬಾರಿ ಯಾವುದೇ ತಪ್ಪಿಗೆ ಅವಕಾಶ ನೀಡುವುದಿಲ್ಲ ಎಂದು ಭಾರತದ ಟಿ-ಟ್ವೆಂಟಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.