’ಮೂರ್ಖರ ದಿನ’ವಾದ ಏಪ್ರಿಲ್ 01ರಂದು ಐಸಿಸಿ ನೂತನ 7 ನಿಯಮಗಳನ್ನು ಪ್ರಕಟಿಸಿತು. ಇದನ್ನು ಕೇಳಿದ ಕ್ರಿಕೆಟ್ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದರು. ಈ ರೂಲ್ಸ್’ಗಳೆಲ್ಲಾ ನಿಜಕ್ಕೂ ಜಾರಿಯಾದರೆ ಹೇಗಿರಬಹುದು ಅಂತ ನೀವೂ ಯೋಚ್ನೆ ಮಾಡಿ, ಸೀರಿಯಸ್ ಆಗಿ ತಗೋಬೇಡಿ. ಯಾಕಂದ್ರೆ ಐಸಿಸಿಗೂ ಕೂಡಾ ಅಭಿಮಾನಿಗಳ ಕಿವಿಗೆ ಹೂ ಇಡಲು ಬರುತ್ತೆ....
ದುಬೈ[ಏ.02]: ಮೂರ್ಖರ ದಿನವಾದ ಏಪ್ರಿಲ್ 01ರಂದು ಕ್ರಿಕೆಟ್ ಅಭಿಮಾನಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸಖತ್ ಫೂಲ್ ಮಾಡಿದ್ದು, ಐಸಿಸಿ ನೀಡಿದ ಶಾಕ್‌ಗೆ ಅಭಿಮಾನಿಗಳು ಬೇಸ್ತು ಬಿದ್ದಿದ್ದಾರೆ.
ಇನ್ಮುಂದೆ ಟೆಸ್ಟ್ ಜೆರ್ಸಿ ಮೇಲೆ ಹೆಸರು, ಸಂಖ್ಯೆ..!
ಮುಂಬರುವ ಐಸಿಸಿ ಟೆಸ್ಟ್ ಚಾಂಪಿಯನ್'ಶಿಪ್ ವೇಳೆ ಮತ್ತಷ್ಟು ಯುವಜನರನ್ನು ತನ್ನತ್ತ ಸೆಳೆಯುವ ಸಲುವಾಗಿ ಹೊಸದಾಗಿ 7 ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಸೋಮವಾರ (ಏ.1) ಬೆಳಗ್ಗೆ ಐಸಿಸಿಯ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿತ್ತು. ಫೋಟೋಗಳ ಜತೆಗೆ ಸ್ವಾರಸ್ಯಕರವಾದ ಒಂದೊಂದೆ ನಿಯಮಗಳನ್ನು ವಿವರಿಸಲಾಗಿತ್ತು. ಒಂದೊಂದೆ ನಿಯಮಗಳನ್ನು ಓದುತ್ತಿದ್ದಂತೆ ಅಭಿಮಾನಿಗಳಲ್ಲಿ ಕ್ರಿಕೆಟ್ ಬಗ್ಗೆ ಮತ್ತಷ್ಟು ಆಸಕ್ತಿ ಕೆರಳುತ್ತಾ ಸಾಗುತ್ತಿತ್ತು. ಆದರೆ, ಇದನ್ನು ಅಧಿಕೃತ ಎಂದು ಎಲ್ಲೂ ಐಸಿಸಿ ಹೇಳದ ಕಾರಣ, ಸೋಮವಾರ ಮೂರ್ಖರ ದಿನವಾಗಿದ್ದು, ಇದು ಐಸಿಸಿ ಮಾಡಿರುವ ಗಿಮಿಕ್ ಎನ್ನಲಾಗಿದೆ.
ಹೊಸ ನಿಯಮಗಳೇನು?
1. ಟಾಸ್‌ಗೆ ಗುಡ್‌ಬೈ!
ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಸಾಂಪ್ರದಾಯಿಕವಾದ ಟಾಸ್‌ಗೆ ಗುಡ್ ಬೈ ಹೇಳಲಿದ್ದು, ಅದರ ಬದಲು ಟ್ವೀಟರ್ ಮೂಲಕ ಜನಾಭಿಪ್ರಾಯ ಸಂಗ್ರಹಿಸಲಾಗುವುದು. ಯಾರು ಮೊದಲು ಬ್ಯಾಟಿಂಗ್ ಮಾಡಬೇಕು, ಬೌಲಿಂಗ್ ಮಾಡಬೇಕು ಎಂಬುದನ್ನು ಅಭಿಮಾನಿಗಳು ನಿರ್ಧರಿಸಲಿದ್ದಾರೆ.
2. ಚಡ್ಡಿ ಧರಿಸಲು ಅವಕಾಶ!
ಟೆನಿಸ್, ಫುಟ್ಬಾಲ್, ಬ್ಯಾಡ್ಮಿಂಟನ್ ಹೀಗೆ ವಿವಿಧ ಆಟಗಾರರಂತೆ ಕ್ರಿಕೆಟಿಗರು ಕೂಡ ಶಾರ್ಟ್ಸ್ (ಚಡ್ಡಿ) ಧರಿಸಿ ಅಂಗಳದಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಪಂದ್ಯ ನಡೆಯುವಾಗ ಉಷ್ಣಾಂಶ 35 ಡಿಗ್ರಿ ದಾಟಿದರೆ, ಶಾರ್ಟ್ಸ್ ಧರಿಸಿ ಆಡಬಹುದಾಗಿದೆ.
3. ಸ್ಲಿಪ್‌ನಲ್ಲಿ ನಿಂತು ಕಾಮೆಂಟ್ರಿ!
ಪಂದ್ಯದ ಬಗ್ಗೆ ಮತ್ತಷ್ಟು ರೋಚಕತೆ ಹುಟ್ಟಿಸುವ ಸಲುವಾಗಿ ವೀಕ್ಷಕ ವಿವರಣೆಗಾರರು ಅಂಗಳದಿಂದಲೇ ನೇರವಾಗಿ ಕಾಮೆಂಟ್ರಿ ನೀಡಲಿದ್ದಾರೆ. ಸ್ಲಿಪ್‌ನಲ್ಲಿ ಆಟಗಾರರ ಹಿಂದೆ ನಿಂತು ವಿವರಣೆ ನೀಡಬಹುದಾಗಿದೆ.
4. ಒಂದೇ ಎಸೆತದಲ್ಲಿ ಕ್ಯಾಚ್ ಹಿಡಿದು ರನೌಟ್ ಮಾಡಬಹುದು!
ನೂತನ ನಿಯಮದ ಪ್ರಕಾರ ಒಂದೇ ಎಸೆತದಲ್ಲಿ 2 ವಿಕೆಟ್ ಪಡೆಯಬಹುದಾಗಿದೆ. ಕ್ಯಾಚ್ ಹಿಡಿದ ತಕ್ಷಣ ಅದೇ ಬಾಲ್‌ನಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ ಅನ್ನು ರನೌಟ್ ಮಾಡಲು ಅವಕಾಶವಿದೆ.
5. ಫುಟ್ಬಾಲ್, ಟೆನಿಸ್‌ಮಯ!
ಫುಟ್ಬಾಲ್, ಟೆನಿಸ್ ಅಭಿಮಾನಿಗಳನ್ನೂ ತನ್ನತ್ತ ಸೆಳೆಯಲು ಐಸಿಸಿ ಹೊಸತಂತ್ರ ರೂಪಿಸಿದೆ. ನೂತನ ನಿಯಮದ ಪ್ರಕಾರ ನೋ ಬಾಲ್‌ಗೆ ‘ಫಾಲ್ಟ್’ ಎಂದು ಹಾಗೂ ಡಾಟ್ ಬಾಲ್‌ಗೆ ‘ಏಸ್’ ಎಂದು ಹೆಸರಿಡಲಾಗಿದೆ.
6. ಒಂದೇ ಎಸೆತದಲ್ಲಿ 12 ರನ್!
ಐಸಿಸಿ ನೂತನ ನಿಯಮದನ್ವಯ ಕ್ರಿಕೆಟ್ ನಲ್ಲಿ ಅಸಾಧ್ಯವಾದುದ್ದೆಲ್ಲ ಸಾಧ್ಯವಾಗಲಿದೆ. ಹೌದು ಹೊಸ ನಿಯಮದಡಿ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ಸಂಜೆ ನಂತರ ಬಾರಿಸುವ ಪ್ರತಿ ರನ್ ದ್ವಿಗುಣ (ಡಬಲ್) ಆಗಲಿದೆ. ಹೀಗಾದರೆ ಬ್ಯಾಟ್ಸ್‌ಮನ್ ಸಿಕ್ಸರ್ ಬಾರಿಸಿದರೆ 12 ರನ್ ತಂಡದ ಖಾತೆಗೆ ಸೇರ್ಪಡೆಯಾಗಲಿದೆ. ಬೌಂಡರಿ ಬಾರಿಸಿದರೆ 8, 1 ರನ್ ಓಡಿದರೆ 2... ಹೀಗೆ ಎಲ್ಲವೂ ಡಬಲ್ ಆಗಲಿದೆ.
7. ವಿದೇಶದಲ್ಲಿ ಗಳಿಸುವ ರನ್ ಮೇಲೆ ಸ್ಥಾನ ನಿರ್ಣಯ!
ಟೆಸ್ಟ್ ಚಾಂಪಿಯನ್‌ಶಿಪ್‌ನ ಶ್ರೇಯಾಂಕ ಹಂಚಿಕೆ ವೇಳೆ ತಂಡಗಳು ಒಂದೇ ಅಂಕ ಗಳಿಸಿದರೆ, ವಿದೇಶಿ ನೆಲದಲ್ಲಿ ಅವುಗಳು ಗಳಿಸಿದ ರನ್‌ಗಳ ಆಧಾರದ ಮೇಲೆ ಪಟ್ಟಿಯಲ್ಲಿ ಅದರ ಸ್ಥಾನ ನಿರ್ಣಯವಾಗಲಿದೆ.
