ದುಬೈ[ಏ.04]: ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ತಡೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ), ವಿಶ್ವಾದ್ಯಂತ ಪೊಲೀಸ್‌ ಸಹಕಾರ ಒದಗಿಸುವ ಇಂಟರ್‌ಪೋಲ್‌ ಜತೆ ಕೈಜೋಡಿಸಿದೆ. 

ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್‌ ಮಾರ್ಷಲ್‌, ಫ್ರಾನ್ಸ್‌ನ ಲಯನ್‌ನಲ್ಲಿರುವ ಇಂಟರ್‌ಪೋಲ್‌ ಪ್ರಧಾನ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು. 

ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಾರ್ಷಲ್‌, ‘ಐಸಿಸಿ ಹಲವು ದೇಶಗಳ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಆದರೆ ಇಂಟರ್‌ಪೋಲ್‌ ಸಹಾಯದೊಂದಿಗೆ ಅದರ 194 ಸದಸ್ಯ ರಾಷ್ಟ್ರಗಳಲ್ಲಿ ನಾವು ಕಾರ್ಯನಿರ್ವಹಿಸಬಹುದು. ಆಟಗಾರರಲ್ಲಿ ಜಾಗೃತಿ ಮೂಡಿಸುವುದು, ಭ್ರಷ್ಟಾಚಾರದಿಂದ ದೂರವಿರಿಸುವುದು ನಮ್ಮ ಮುಖ್ಯ ಗುರಿ’ ಎಂದು ಹೇಳಿದ್ದಾರೆ.