ನಾನು ಸಾಕಷ್ಟು ಕಾರಣಗಳಿಂದಾಗಿ ಕಳೆದ 7-8 ವರ್ಷ ಕ್ರಿಕೆಟ್ ಆಡುವುದರಿಂದ ವಂಚಿತನಾಗಿದ್ದೆ. ನನ್ನ ದೇಹ ಕ್ರಿಕೆಟ್ ಆಡಲು ಎಲ್ಲಿಯವರೆಗೆ ಸ್ಪಂದಿಸುತ್ತದೋ ಅಲ್ಲಿಯವರೆಗೆ ಕ್ರಿಕೆಟ್ ಆಡುತ್ತೇನೆ ಎಂದು ನೆಹ್ರಾ ಹೇಳಿದ್ದಾರೆ.

ನವದೆಹಲಿ(ಅ.06): ಟೀಂ ಇಂಡಿಯಾದ ಹಿರಿಯ ಅನುಭವಿ ವೇಗಿ ಆಶಿಶ್ ನೆಹ್ರಾ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಗಾಯದ ಸಮಸ್ಯೆಯಿಂದ ಸಾಕಷ್ಟು ಸಮಯದಿಂದ ತಂಡದಿಂದ ಹೊರಗುಳಿದಿದ್ದ ನೆಹ್ರಾ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 38ನೇ ವಯಸ್ಸಿನಲ್ಲಿ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡಿದ್ದು ಸಾಕಷ್ಟು ಮಂದಿಯ ಹುಬ್ಬೇರುವಂತೆ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಡಗೈ ವೇಗಿ, ನಾನು ಇನ್ನು ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡಬಲ್ಲೇ. 38-39ನೇ ವಯಸ್ಸಿನಲ್ಲಿ ವೇಗದ ಬೌಲಿಂಗ್ ಸಂಘಟಿಸುವುದು ಸುಲಭದ ಮಾತಲ್ಲ. ಆದರೆ ನನ್ನ ಸಾಮರ್ಥ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ನಾನು ಸಾಕಷ್ಟು ಕಾರಣಗಳಿಂದಾಗಿ ಕಳೆದ 7-8 ವರ್ಷ ಕ್ರಿಕೆಟ್ ಆಡುವುದರಿಂದ ವಂಚಿತನಾಗಿದ್ದೆ. ನನ್ನ ದೇಹ ಕ್ರಿಕೆಟ್ ಆಡಲು ಎಲ್ಲಿಯವರೆಗೆ ಸ್ಪಂದಿಸುತ್ತದೋ ಅಲ್ಲಿಯವರೆಗೆ ಕ್ರಿಕೆಟ್ ಆಡುತ್ತೇನೆ ಎಂದು ನೆಹ್ರಾ ಹೇಳಿದ್ದಾರೆ.

ನೆಹ್ರಾ 5 ವರ್ಷಗಳ ಬಳಿಕ 2016ರಲ್ಲಿ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡಿದ್ದರು. ಅದಾದ ಬಳಿಕ ಟಿ20 ತಂಡದ ಅವಿಭಾಜ್ಯ ಅಂಗವಾಗಿರುವ ನೆಹ್ರಾ ಕಳೆದ ವರ್ಷದ ಟಿ20 ವಿಶ್ವಕಪ್ ಸೆಮಿಫೈನಲ್'ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು.