ಮಹಿಳೆಯರ ಸಿಂಗಲ್ಸ್‌'ನ ಮತ್ತೊಂದು ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತೆ ಆಟಗಾರ್ತಿ ಭಾರತದ ಪಿ.ವಿ. ಸಿಂಧು 21-18, 21-10 ಗೇಮ್‌'ಗಳಿಂದ ಸ್ಥಳೀಯ ಶಟ್ಲರ್ ಲೆಂಗ್ ಯ್ಯುಟ್ ಯೀ ಎದುರು ಜಯ ಪಡೆದರು.

ಕೌಲೂನ್(ನ.22): ಭಾರತದ ತಾರಾ ಶಟ್ಲರ್‌'ಗಳಾದ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಹಾಗೂ ಎಚ್.ಎಸ್.ಪ್ರಣಯ್ ಹಾಂಕಾಂಗ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ, ಟೂರ್ನಿಯ ಮೊದಲ ಸುತ್ತಿನಲ್ಲಿ ರೋಚಕ ಕಾದಾಟದಲ್ಲಿ ಜಯಭೇರಿ ಬಾರಿಸಿದರು. ಆತ್ಮವಿಶ್ವಾಸದಿಂದ ಕಣಕ್ಕಿಳಿದ ವಿಶ್ವದ 11ನೇ ಶ್ರೇಯಾಂಕಿತೆ ಆಟಗಾರ್ತಿ ಸೈನಾ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ವಿಶ್ವದ 44ನೇ ಶ್ರೇಯಾಂಕಿತೆ ಡೆನ್ಮಾರ್ಕ್‌'ನ ಮಿಟ್ಟೆ ಪೌಲ್ಸನ್ ವಿರುದ್ಧ 21-19, 23-21 ಗೇಮ್‌'ಗಳಿಂದ ಗೆಲುವು ಸಾಧಿಸಿದರು.

ಮಹಿಳೆಯರ ಸಿಂಗಲ್ಸ್‌'ನ ಮತ್ತೊಂದು ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತೆ ಆಟಗಾರ್ತಿ ಭಾರತದ ಪಿ.ವಿ. ಸಿಂಧು 21-18, 21-10 ಗೇಮ್‌'ಗಳಿಂದ ಸ್ಥಳೀಯ ಶಟ್ಲರ್ ಲೆಂಗ್ ಯ್ಯುಟ್ ಯೀ ಎದುರು ಜಯ ಪಡೆದರು.

ಪುರುಷರ ಸಿಂಗಲ್ಸ್‌'ನಲ್ಲಿ ಆರಂಭಿಕ ಆಘಾತದ ನಡುವೆಯೂ ಸಿಡಿದೆದ್ದ ಪ್ರಣಯ್, ಹಾಂಕಾಂಗ್‌'ನ ಹು ಯುನ್ ವಿರುದ್ಧ 19-21, 21-17, 21-15 ಗೇಮ್‌'ಗಳಿಂದ ಗೆಲುವು ಸಾಧಿಸಿ, ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ಆದರೆ ಅನುಭವಿ ಆಟಗಾರ ಪಿ. ಕಶ್ಯಪ್, ಬಿ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.