Khelo India: ಇಂದಿನಿಂದ ಖೇಲೋ ಇಂಡಿಯಾ ಗೇಮ್ಸ್‌ ಶುರು

* ಖೇಲೋ ಇಂಡಿಯಾ ಗೇಮ್ಸ್‌ ಕ್ರೀಡಾಕೂಟಕ್ಕೆ ಕ್ಷಣಗಣನೆ

* 4ನೇ ಆವೃತ್ತಿಯ ಕ್ರೀಡಾಕೂಟಕ್ಕೆ ಗೃಹ ಸಚಿವ ಅಮಿತ್ ಶಾ ಚಾಲನೆ

* ಹರ್ಯಾಣದ ಪಂಚಕುಲದಲ್ಲಿ ಗೃಹ ಸಚಿವರಿಂದ ಚಾಲನೆ

Home Minister Amit Shah to inaugurate Khelo India Youth Games today kvn

ಪಂಚಕುಲ: ಬಹು ನಿರೀಕ್ಷಿತ 4ನೇ ಆವೃತ್ತಿ ಖೇಲೋ ಇಂಡಿಯಾ (Khelo India Games) ಕಿರಿಯರ ಕ್ರೀಡಾಕೂಟಕ್ಕೆ ಶನಿವಾರ ಹರ್ಯಾಣದ ಪಂಚಕುಲದಲ್ಲಿ ಚಾಲನೆ ಸಿಗಲಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್‌ ಕಾರಣದಿಂದ ಕ್ರೀಡಾಕೂಟ 1 ವರ್ಷ ಮುಂದೂಡಲ್ಪಟ್ಟಿತ್ತು. ಸುಮಾರು 2262 ಬಾಲಕಿಯರು ಸೇರಿದಂತೆ ಒಟ್ಟು 4700 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಇದೇ ಮೊದಲ ಬಾರಿಗೆ ದೇಶದ ಎಲ್ಲಾ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಗೇಮ್ಸ್‌ನಲ್ಲಿ ಸ್ಪರ್ಧೆ ನಡೆಸಲಿದ್ದು, ಹರ್ಯಾಣ(398)ದಿಂದ ಅತಿ ಹೆಚ್ಚು, ಅಂಡಮಾನ್‌ ನಿಕೋಬಾರ್‌(06)ನಿಂದ ಅತಿ ಕಡಿಮೆ ಸಂಖ್ಯೆಯ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಬಾರಿ ಮಲ್ಲಕಂಬ, ಯೋಗಾಸನ, ಕಳರಿಪಯಟ್ಟು ಸೇರಿದಂತೆ ಸುಮಾರು 25 ಸ್ಪರ್ಧೆಗಳಿದ್ದು, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಕಬಡ್ಡಿ, ಬಾಕ್ಸಿಂಗ್‌ ಸೇರಿದಂತೆ ಬಹುತೇಕ ಸ್ಪರ್ಧೆಗಳು ಪಂಚಕುಲದಲ್ಲೇ ನಡೆಯಲಿವೆ. ಕೆಲ ಸ್ಪರ್ಧೆಗಳಿಗೆ ಅಂಬಾಲ(ಜಿಮ್ನಾಸ್ಟಿಕ್‌, ಈಜು), ಶಾಹಬಾದ್‌(ಹಾಕಿ), ಚಂಡೀಗಢ (ಆರ್ಚರಿ, ಫುಟ್ಬಾಲ್‌) ಹಾಗೂ ನವದೆಹಲಿ(ಸೈಕ್ಲಿಂಗ್‌, ಶೂಟಿಂಗ್‌) ಸಹ ಆತಿಥ್ಯ ವಹಿಸಲಿವೆ. ಜೂ.13ಕ್ಕೆ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.

ಅಮಿತ್‌ ಶಾರಿಂದ ಗೇಮ್ಸ್‌ಗೆ ಚಾಲನೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ 4ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಪಂಚಕುಲಾದ ತೌ ದೇವಿ ಲಾಲ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕ್ರೀಡಾಕೂಟದ ಆಯೋಜನೆಗೆ ಹರ್ಯಾಣ ಸರ್ಕಾರ (Haryana Government) 250 ಕೋಟಿ ರು. ಖರ್ಚು ಮಾಡುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಹಲವು ಸಾಂಸ್ಕೃತಿಕ ಕಾರ‍್ಯಕ್ರಮಗಳು ಇರಲಿವೆ. ಕ್ರೀಡಾಕೂಟದ ಆಯೋಜನೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ಕ್ರೀಡಾಪಟುಗಳಿಗೆ ಉತ್ತಮ ಅನುಭವ ದೊರೆಯಲಿದೆ ಎಂದು ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಹೇಳಿದ್ದಾರೆ.

ಕರ್ನಾಟಕದಿಂದ 194 ಕ್ರೀಡಾಳುಗಳು: ಈ ಬಾರಿ ಗೇಮ್ಸ್‌ನಲ್ಲಿ ಕರ್ನಾಟಕದ 194 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 84 ಬಾಲಕರು, 110 ಬಾಲಕಿಯರು ಇದ್ದಾರೆ. ಕಳೆದ ವರ್ಷ ಅಸ್ಸಾಂನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಕರ್ನಾಟಕ 32 ಚಿನ್ನ ಸೇರಿ ಒಟ್ಟು 80 ಪದಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿತ್ತು.

ರಾಜ್ಯದಲ್ಲಿ ಪಿಬಿಎಲ್‌ ರೀತಿ ಹೊಸ ಬ್ಯಾಡ್ಮಿಂಟನ್‌ ಲೀಗ್‌

ಬೆಂಗಳೂರು: ಕರ್ನಾಟಕದ ಚೊಚ್ಚಲ ಆವೃತ್ತಿಯ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ಗೆ ಶನಿವಾರ ಚಾಲನೆ ಸಿಗಲಿದ್ದು, ಭಾರತದ ಬ್ಯಾಡ್ಮಿಂಟನ್‌ ತಾರೆಗಳಾದ ಪಿ.ವಿ.ಸಿಂಧು (PV Sindhu), ಕಿದಂಬಿ ಶ್ರೀಕಾಂತ್‌ (Kidambi Srikanth), ಸಾಯಿ ಪ್ರಣೀತ್‌, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ ಹಾಗೂ ಚಿರಾಗ್‌ ಶೆಟ್ಟಿಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ(ಕೆಬಿಎ) ಬೆಂಬಲದೊಂದಿಗೆ ಆಯೋಜನೆಗೊಳ್ಳುತ್ತಿರುವ ಈ ಲೀಗ್‌ ಜುಲೈ 1ರಿಂದ 10ರ ವರೆಗೆ ನಡೆಯಲಿದೆ. ಲೀಗ್‌ನಲ್ಲಿ ಬೆಂಗಳೂರು ಲಯನ್ಸ್‌, ಮಂಗಳೂರು ಶಾರ್ಕ್ಸ್, ಮಂಡ್ಯ ಬುಲ್ಸ್‌, ಮೈಸೂರು ಪ್ಯಾಂಥ​ರ್ಸ್‌, ಮಲ್ನಾಡ್‌ ಫಾಲ್ಕನ್ಸ್‌, ಬಂಡೀಪುರ ಟಸ್ಕ​ರ್ಸ್‌, ಕೆಜಿಎಫ್ ವೋಲ್ವ್ಸ್ ಮತ್ತು ಕೊಡಗು ಟೈಗರ್ಸ್‌ ತಂಡಗಳು ಪಾಲ್ಗೊಳ್ಳಲಿವೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವಿಶ್ವ ಚಾಂಪಿಯನ್‌ ನಿಖಾತ್‌..!

ಬಹುತೇಕ ತಂಡಗಳನ್ನು ಐಟಿ ಉದ್ಯೋಗಿಗಳು ಖರೀದಿಸಿದ್ದು, ಬೆಂಗಳೂರು ತಂಡದಲ್ಲಿ ಪಿ.ವಿ.ಸಿಂಧು ಸಹ ಹಣ ಹೂಡಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೀಗ್‌ನ ಎಲ್ಲಾ ತಂಡಗಳಲ್ಲೂ ರಾಜ್ಯದ ಕನಿಷ್ಠ ಐವರು, ಇಬ್ಬರು ವಿದೇಶಿ, ಮೂವರು ಮಹಿಳಾ ಆಟಗಾರ್ತಿಯರು ಸೇರಿ 10 ಮಂದಿ ಇರಲಿದ್ದಾರೆ. ಈವರೆಗೆ ಲೀಗ್‌ಗೆ 400 ಮಂದಿ ನೋಂದಣಿ ಮಾಡಿಕೊಂಡಿದ್ದು, ಮುಂದಿನ ವಾರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios