ಜುಲೈ 22 ರಂದು 7 ಹಾಗೂ 8ನೇ ಸ್ಥಾನಕ್ಕೆ ನಡೆಯಲಿರುವ ಪಂದ್ಯದಲ್ಲಿ ಭಾರತ ಕಣಕ್ಕಿಳಿಯಲಿದೆ.

ಜೋಹಾನ್ಸ್‌'ಬರ್ಗ್(ಜು.20): ಗೋಲ್ ಕೀಪರ್ ಸವಿತಾ ಅವರ ಪ್ರಭಾವಿ ಪ್ರದರ್ಶನದ ಹೊರತಾಗಿಯೂ ಭಾರತ ತಂಡ, ಮಹಿಳೆಯರ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಜಪಾನ್ ಎದುರು 0-2 ಗೋಲುಗಳಿಂದ ಸೋಲು ಕಂಡಿದೆ. ಈ ಸೋಲಿನಿಂದಿಗೆ 2018ರ ಮಹಿಳಾ ಹಾಕಿ ವಿಶ್ವಕಪ್‌'ಗೆ ಅರ್ಹತೆ ಪಡೆಯುವಲ್ಲಿ ಭಾರತ ವಿಫಲವಾಗಿದೆ.

ಇಂದು 5ರಿಂದ 8ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ ಏಳನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಕನಾ ನೊಮುರಾ ತಂಡದ ಪರ ಮೊದಲ ಗೋಲು ದಾಖಲಿಸಿದರು. ನಾಹೊ ಇಚಿಟಾನಿ 29ನೇ ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆಯನ್ನು 2-0ಗೇರಿಸಿದರು.

ಪಂದ್ಯದುದ್ದಕ್ಕೂ ಭಾರತ ಎಷ್ಟೇ ಪ್ರಯತ್ನಿಸಿದರೂ ಎದುರಾಳಿಯ ರಕ್ಷಣಾ ಕೋಟೆಯನ್ನು ವಂಚಿಸಲು ಸಾಧ್ಯವಾಗಲಿಲ್ಲ. ಕೊನೆ 15 ನಿಮಿಷದಲ್ಲಿ ತಂಡ ಆಕ್ರಮಣಕಾರಿ ಆಟವಾಡಿದರೂ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಜುಲೈ 22 ರಂದು 7 ಹಾಗೂ 8ನೇ ಸ್ಥಾನಕ್ಕೆ ನಡೆಯಲಿರುವ ಪಂದ್ಯದಲ್ಲಿ ಭಾರತ ಕಣಕ್ಕಿಳಿಯಲಿದೆ.