ಸತತ ಎರಡು ಗೆಲುವುಗಳ ಮೂಲಕ ನಾಕೌಟ್ ಹಂತ ಪ್ರವೇಶಿಸಿರುವ ಭಾರತ ತಂಡ ಏಪ್ರಿಲ್ 8ರಂದು ಸೆಮಿಫೈನಲ್ ಪಂದ್ಯವಾಡಲಿದೆ.

ವೆಸ್ಟ್ ವಾಂಕೊವರ್, ಕೆನಡಾ(ಏ. 03): ವಿಶ್ವ ಹಾಕಿ ಲೀಗ್'ನಲ್ಲಿ ಭಾರತೀಯ ವನಿತೆಯರ ತಂಡ ಸತತ ಎರಡನೇ ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ವಂದನಾ ಕಟಾರಿಯಾ ಅವರ ಗೋಲಿನ ಸಹಾಯದಿಂದ ಭಾರತ ಮಹಿಳಾ ಹಾಕಿ ತಂಡ 1-0 ಗೋಲಿನಿಂದ ಬೆಲಾರಸ್ ಮಹಿಳೆಯರನ್ನು ಮಣಿಸಿದೆ. ಎ ಗುಂಪಿನ ಈ ಪಂದ್ಯದಲ್ಲಿ ವಂದನಾ 26ನೇ ನಿಮಿಷದಲ್ಲಿ ಗೋಲು ಗಳಿಸಿದರು. ಬೆಲಾರಸ್ ವನಿತೆಯರು ತೀವ್ರ ಪೈಪೋಟಿ ನೀಡಿದರಾದರೂ, ಭಾರತೀಯರು ಇಡೀ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರು. ಮೂರ್ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳೂ ಭಾರತಕ್ಕೆ ಸಿಕ್ಕಿದ್ದವು. ಭಾರತದ ಗೋಲ್'ಕೀಪರ್ ಸವಿತಾ ಅವರ ಪ್ರದರ್ಶನವೂ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಉರುಗ್ವೆ ಎದುರು ಗೆದ್ದ ಭಾರತ:
ಇದಕ್ಕೂ ಮುನ್ನ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಉರುಗ್ವೆ ವಿರುದ್ಧ ಶೂಟೌಟ್‌'ನಲ್ಲಿ 4-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಪಂದ್ಯದ ಪೂರ್ಣಾವಧಿ ಆಟದಲ್ಲಿ ಎರಡು ತಂಡಗಳು 2- 2 ಗೋಲುಗಳಿಸಿ ಡ್ರಾ ಸಾಧಿಸಿದ್ದವು. ಹೀಗಾಗಿ ಫಲಿತಾಂಶಕ್ಕಾಗಿ ಎರಡೂ ತಂಡಗಳಿಗೂ ತಲಾ 5 ಪೆನಾಲ್ಟಿಶೂಟೌಟ್‌ ನೀಡಲಾಗಿತ್ತು. ಇದರಲ್ಲಿ ಭಾರತ ವನಿತೆಯರ ತಂಡ 4-2ರಿಂದ ಉರುಗ್ವೆ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. 

ಭಾರತ ತಂಡದ ಪರ ರಾಣಿ 11 ನೇ ನಿಮಿಷ, ವಂದನಾ ಕಟಾರಿಯಾ 49ನೇ ನಿಮಿಷದಲ್ಲಿ ಗೋಲುಗಳಿಸಿದರು. ಉರುಗ್ವೆ ತಂಡದ ಪರ ಮರಿಯಾ ತೆರೆಸಾ ವಿಯಾನ ಅಚೆ 45ನೇ ನಿ., ಮನುಲಾ ವಿಲಾರ್‌ 54ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 

ಪಂದ್ಯದ ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಭಾರತ ತಂಡ, ಮೊದಲ ಕ್ವಾರ್ಟರ್‌'ನ 11ನೇ ನಿಮಿಷದಲ್ಲಿ ರಾಣಿ ಗೋಲುಗಳಿಸಿ ತಂಡದ ಖಾತೆ ತೆರೆದರು. 2ನೇ ಕ್ವಾರ್ಟರ್‌ನಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಮೂರನೇ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಉರುಗ್ವೆ ತಂಡದ ಮರಿಯಾ, ಭಾರತ ತಂಡದ ಗೋಲ್‌ಕೀಪರ್‌ನ್ನು ವಂಚಿಸುವಲ್ಲಿ ಯಶಸ್ವಿಯಾಗಿ ಗೋಲುಗಳಿಸಿ 1-1ರಿಂದ ಸಮಬಲ ತಂದರು. ನಾಲ್ಕನೇ ಮತ್ತು ಕೊನೆಯ ಕ್ವಾರ್ಟರ್‌ ಆಟ ಆರಂಭದ 4ನೇ ನಿಮಿಷದಲ್ಲಿ ಭಾರತದ ವಂದನಾ ಗೋಲುಗಳಿಸಿ ಮತ್ತೆ ತಂಡಕ್ಕೆ 2-1ರ ಮುನ್ನಡೆ ನೀಡಿದರು. ಇದಾದ 5 ನಿಮಿಷಗಳಿಗೆ ಉರುಗ್ವೆಯ ಮನುಲಾ ಗೋಲುಗಳಿಸಿ ಸಮಬಲ ಸಾಧಿಸಿದರು.

ಏ.8ರಂದು ಸೆಮಿಸ್:
ಸತತ ಎರಡು ಗೆಲುವುಗಳ ಮೂಲಕ ನಾಕೌಟ್ ಹಂತ ಪ್ರವೇಶಿಸಿರುವ ಭಾರತ ತಂಡ ಏಪ್ರಿಲ್ 8ರಂದು ಸೆಮಿಫೈನಲ್ ಪಂದ್ಯವಾಡಲಿದೆ. ಕೆನಡಾದಲ್ಲಿ ನಡೆಯುತ್ತಿರುವ ಎರಡನೇ ಸುತ್ತಿನ ಮಹಿಳಾ ಹಾಕಿ ವರ್ಲ್ಡ್ ಲೀಗ್'ನಲ್ಲಿ ಭಾರತದ ಜೊತೆಗೆ ಉರುಗ್ವೆ, ಚೀನಾ, ಕೆನಡಾ, ಮೆಕ್ಸಿಕೋ, ಬೆಲಾರಸ್ ಮತ್ತು ಟ್ರಿನಿಡಾಡ್ & ಟೊಬಾಗೋ ದೇಶದ ತಂಡಗಳು ಪಾಲ್ಗೊಂಡಿವೆ.

epaper.kannadaprabha.in