2013ರಲ್ಲಿ ಉನ್ನತ ಪ್ರದರ್ಶನ ನಿರ್ದೇಶಕರಾಗಿ ಭಾರತಕ್ಕೆ ಆಗಮಿಸಿದ್ದ ಓಲ್ಟ್‌'ಮನ್ಸ್, ನಾಲ್ಕೂವರೆ ವರ್ಷಗಳ ಕಾಲ ತಂಡದೊಂದಿಗೆ ಕೆಲಸ ಮಾಡಿದ್ದಾರೆ.

ನವದೆಹಲಿ(ಸೆ.02): ಇತ್ತೀಚೆಗಷ್ಟೇ ಮುಕ್ತಾಯವಾದ ಅಂತಾರಾಷ್ಟ್ರೀಯ ಸರಣಿಗಳು ಸೇರಿದಂತೆ ಮಹತ್ವದ ಪಂದ್ಯಾವಳಿಗಳಲ್ಲಿ ಹಾಕಿ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ತೋರದ ಹಿನ್ನಲೆಯಲ್ಲಿ, ಪ್ರಧಾನ ಕೋಚ್ ರೋಲೆಂಟ್ ಓಲ್ಟ್‌'ಮನ್ಸ್ ಅವರನ್ನು ಹಾಕಿ ಇಂಡಿಯಾ ವಜಾಗೊಳಿಸಿದೆ. ನೂತನ ಕೋಚ್ ನೇಮಕವಾಗುವವರೆಗೂ ತಂಡದ ನಿರ್ದೆಶಕ ಡೇವಿಡ್ ಜಾನ್‌ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

2013ರಲ್ಲಿ ಉನ್ನತ ಪ್ರದರ್ಶನ ನಿರ್ದೇಶಕರಾಗಿ ಭಾರತಕ್ಕೆ ಆಗಮಿಸಿದ್ದ ಓಲ್ಟ್‌'ಮನ್ಸ್, ನಾಲ್ಕೂವರೆ ವರ್ಷಗಳ ಕಾಲ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಇಂದು ನಡೆದ ಹಾಕಿ ಇಂಡಿಯಾ ಉನ್ನತ ಪ್ರದರ್ಶನ ಹಾಗೂ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಓಲ್ಟ್‌'ಮನ್ಸ್ ವಜಾಗೊಳಿಸುವ ಬಗ್ಗೆ ಸಭೆ ತೀರ್ಮಾನಿಸಿದೆ. ಪ್ರಧಾನ ಕೋಚ್ ಆಗಿ ಆಟಗಾರರ ದೈಹಿಕ ಕ್ಷಮತೆ, ಹೊಂದಾಣಿಕೆ ಹೆಚ್ಚಿಸುವಲ್ಲಿ ಓಲ್ಟ್‌'ಮನ್ಸ್ ಉತ್ತಮ ಕಾರ್ಯ ನಿರ್ವಹಿಸಿದ್ದರೂ, ತಂಡದ ಒಟ್ಟಾರೆ ಪ್ರದರ್ಶನ ಬಗ್ಗೆ ಸಮಾಧಾನ ತಂದಿಲ್ಲ’ ಎಂದು ಹಾಕಿ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸಭೆಯಲ್ಲಿ ಓಲ್ಟ್‌'ಮನ್ಸ್ ಸೇರಿದಂತೆ 24ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

‘2018ರ ಏಷ್ಯನ್ ಗೇಮ್ಸ್ ಹಾಗೂ ವಿಶ್ವಕಪ್ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್‌'ಗೆ ತಂಡ ಸಿದ್ಧಪಡಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹಾಕಿ ಇಂಡಿಯಾ ಆಯ್ಕೆಗಾರ ಹರ್ಬಿಂದರ್ ಸಿಂಗ್ ಹೇಳಿದ್ದಾರೆ.

ಓಲ್ಟ್‌'ಮನ್ಸ್ ವಜಾ ನಿರೀಕ್ಷಿತ: ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಹಾಗೂ ಯುರೋಪ್ ಪ್ರವಾಸದಲ್ಲಿ ತಂಡ ಸಾಧಾರಣ ಪ್ರದರ್ಶನ ತೋರಿದ ಬಳಿಕ ರೋಲೆಂಟ್ ಓಲ್ಟ್‌ಮನ್ಸ್ ವಜಾಗೊಳಿಸಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ತಮ್ಮನ್ನು ವಜಾಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಓಲ್ಟ್‌ಮನ್ಸ್ ‘ಭಾರತದಲ್ಲಿ ವಿದೇಶಿ ಕೋಚ್‌ಗಳಿಗೆ ಕೆಲಸ ಮಾಡುವುದು ಸುಲಭದ ಕೆಲಸವಲ್ಲ. ಇಲ್ಲಿಗೆ ಬರುವಾಗಲೇ ಒಂದಲ್ಲ ಒಂದು ದಿನ ನನ್ನನ್ನು ವಜಾಗೊಳಿಸಲಾಗುತ್ತದೆ ಎನ್ನುವ ಮನಸ್ಥಿತಿಯೊಂದಿಗೇ ಬಂದಿದ್ದೆ. ಮೊದಲ ದಿನದಿಂದಲ್ಲೇ ಮಾನಸಿಕವಾಗಿ ಸಿದ್ಧನಾಗಿದ್ದೆ. ನಾಲ್ಕೂವರೆ ವರ್ಷದಲ್ಲಿ ಭಾರತೀಯ ಹಾಕಿಗೆ ತಕ್ಕಮಟ್ಟಿಗೆ ಕೊಡುಗೆ ನೀಡಿದ್ದೇನೆ ಎನ್ನುವ ಹೆಮ್ಮೆ ನನಗಿದೆ. ಆದರೆ ಹಾಕಿ ಇಂಡಿಯಾದ ಈ ನಿರ್ಧಾರ ತಂಡದ ಹಿತದೃಷ್ಟಿಯಲ್ಲಿಲ್ಲ’ ಎಂದು ಹೇಳಿದ್ದಾರೆ.