ನವೀನ್ ಕೊಡಸೆ

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆಕಂಡಿದೆ. ವಿಕಲಚೇತನರಿಗಾಗಿಯೇ ನಡೆಯುವ ಈ ಕ್ರೀಡೆಯಲ್ಲಿ ಭಾರತ ಹಿಂದೆದಿಗಿಂತಲೂ ಉತ್ತಮ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ ತಿಂಗಳಷ್ಟೇ ಮುಕ್ತಾಯವಾದ ರಿಯೊ ಒಲಿಂಪಿಕ್ಸ್'ನಲ್ಲಿ ಭಾರತ 120 ಕ್ರೀಡಾಪಟುಗಳನ್ನು ಕಳಿಸಿಕೊಟ್ಟಿತ್ತು. ಭಾರೀ ನಿರೀಕ್ಷೆಯೊಂದಿಗೆ ರಿಯೊ ಕೂಟಕ್ಕೆ ತೆರಳಿದ್ದ ಭಾರತೀಯ ಸ್ಪರ್ಧಿಗಳು ಕೇವಲ ಎರಡು ಪದಕಗಳನ್ನು ಗೆದ್ದು ನಿರಾಸೆ ಮೂಡಿಸಿದ್ದರು. ಆದರೆ ನಮ್ಮ ಪ್ಯಾರಾಲಿಂಪಿಕ್ಸ್ ಪಟುಗಳು ಆ ನಿರಾಸೆಯ ಕಾರ್ಮೋಡಗಳನ್ನು ಅಳಿಸಿಹಾಕಿ ಬಿಟ್ಟರು. ಮರಿಯಪ್ಪನ್ ತಂಗವೇಲು ಹೈಜಂಪ್'ನಲ್ಲಿ ಭಾರತದ ಪಾಲಿಗೆ ಮೊದಲ ಚಿನ್ನದ ಉಡುಗೊರೆ ನೀಡಿದರೆ, ಅದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ವರುಣ್ ಬಾಟಿ ಕಂಚಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. ಇನ್ನು ವೀಲ್ ಚೇರ್'ನಲ್ಲೇ ಕುಳಿತು ಶಾಟ್'ಪುಟ್'ನಲ್ಲಿ ದೀಪಾ ಮಲಿಕ್ ದೇಶಕ್ಕೆ ರಜತ ಗೆದ್ದುಕೊಟ್ಟರು. ಅಥೆನ್ಸ್ ಪ್ಯಾರಾಲಿಂಪಿಕ್ಸ್'ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವಲಿನ್ ಪಟು ದೇವೇಂದ್ರ ಜಜೂರಿಯಾ ವಿಶ್ವದಾಖಲೆ ನಿರ್ಮಿಸುವುದರ ಜೊತೆಗೆ ಚಿನ್ನದ ಪದಕವನ್ನು ಕೊರಳಿಗೇರಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಕ್ರೀಡಾಪಟುಗಳಿಗೆ ನಿಜಕ್ಕೂ ಬೇಕಿರುವುದು ಅನುಕಂಪವಲ್ಲ ಬದಲಾಗಿ ಸೂಕ್ತ ಅವಕಾಶ ನೀಡಬೇಕಷ್ಟೆ..

ರಿಯೋ ಕೂಟದಲ್ಲಿ ಪದಕ ಗೆದ್ದುಕೊಟ್ಟ ಸಾಕ್ಷಿ ಮಲಿಕ್ ಆಗಲಿ, ಪಿ.ವಿ. ಸಿಂಧುವಾಗಲಿ ವಿದೇಶದಲ್ಲೋ ಇಲ್ಲವೇ ವಿದೇಶಿ ಕೋಚ್ ಬಳಿಯೋ ತರಬೇತಿ ಪಡೆದವರಲ್ಲ. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಜಿಮ್ನಾಸ್ಟಿಕ್'ನಲ್ಲೂ ಪದಕ ಗೆಲ್ಲುವ ಭರವಸೆ ಮೂಡಿಸಿ ದೇಶದ ಜನರೇ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ದೀಪಾ ಕರ್ಮಾಕರ್ ಕೂಡ ದೇಶಿ ಕೋಚ್ ಗರಡಿಯಲ್ಲೇ ಪಳಗಿ ಇಡೀ ಜಗತ್ತೇ ಹುಬ್ಬೇರುವಂತಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಕೆಲವರಿಗೆ ವಿದೇಶದಲ್ಲಿ ತರಬೇತಿ, ಇನ್ನೂ ಕೆಲವರಿಗೆ ವಿದೇಶಿ ಪರಿಣಿತ ಕೋಚ್'ಗಳಿಂದ ತರಬೇತಿ ಕೊಡಿಸಿದರೂ ಅದರಿಂದ ಸಿಕ್ಕ ಫಲಿತಾಂಶ ಮಾತ್ರ ಅಕ್ಷರಶಃ ಶೂನ್ಯ.

ಇಲ್ಲಿ ಸಮಸ್ಯೆ ಇರುವುದು ವಿದೇಶದಲ್ಲಿ ತರಬೇತಿ ಪಡೆದವರು ಮಾತ್ರ ಯಶಸ್ವಿಯಾಗುತ್ತಾರೆ ಎಂದಲ್ಲ. ಬದಲಾಗಿ ಕ್ರೀಡಾಪ್ರತಿಭೆಗಳನ್ನು ಬೇರುಮಟ್ಟದಲ್ಲಿ ಗುರುತಿಸುವ ಪ್ರಯತ್ನವನ್ನು ಪೋಷಕರು, ಶಿಕ್ಷಕರು ಹಾಗೂ ಸಮಾಜ ಮಾಡಬೇಕಿದೆ. ಈಗಲೂ ಬಹುತೇಕ ಗ್ರಾಮಾಂತರ ಕ್ರೀಡಾಪಟುಗಳು ಓಟದ ಸ್ಪರ್ಧೆಗಳಲ್ಲಿ ಬರಿಗಾಲಲ್ಲಿ ಓಡುವುದನ್ನು ನೋಡಿದರೇ ಕ್ರೀಡೆಗೆ ಕೊಡುತ್ತಿರುವ ಮಹತ್ವ ನಮಗೆ ಅರಿವಾಗುತ್ತದೆ. ನಮ್ಮಲ್ಲಿ ಮೊದಲು ಪಾಠ ಆಮೇಲೆ ಆಟ ಎಂಬ ಮನಸ್ಥಿತಿ ಬದಲಾಗಬೇಕಿದೆ. ವಿಶ್ವಮಟ್ಟದಲ್ಲಿ ನಾವು ಸ್ಪರ್ಧಿಸಬೇಕೆಂದರೆ ಆ ಮಟ್ಟಿನಲ್ಲೇ ನಾವು ತಯಾರಿ ನಡೆಸಬೇಕಿದೆ ಜೊತೆಗೆ ಅರ್ಹರನ್ನು ಗುರುತಿಸಿ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡಬೇಕಿದೆ. ಒಲಿಂಪಿಕ್ಸ್'ನಲ್ಲಿ ಪದಕ ಗೆದ್ದಾಕ್ಷಣ ಬಹುಮಾನಗಳ ಸುರಿಮಳೆ ಸುರಿಸುವ ಸರ್ಕಾರ, ಉಧ್ಯಮಿಗಳು ಆರಂಭದಲ್ಲೇ ಏಕೆ ಇಂತಹ ಕೆಲಸವನ್ನು ಮಾಡುತ್ತಿಲ್ಲ ಎನ್ನುವುದೇ ಅರ್ಥವಾಗುತ್ತಿಲ್ಲ. ಕ್ರಿಕೆಟ್'ಗೆ ಸಿಗುವ ಮಾನ್ಯತೆ ಉಳಿದ ಕ್ರೀಡೆಗೆ ಸಿಗದೇ ಇರುವುದೂ ಕೂಡ ಈ ಹಿನ್ನಡೆಗೆ ಕಾರಣವಿರಬಹುದೇನೋ..

ಇನ್ನು, ಪ್ಯಾರಾಲಿಂಪಿಕ್ಸ್'ನಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು, ವರುಣ್ ಭಾಟಿ ಅವರ ಸಾಧನೆಯಿರಬುದು, ಹಾಗೆಯೇ ದೀಪಾ ಮಲಿಕ್ ಸಾವಿನೊಂದಿಗೆ ಸೆಣಸಿ ಶಾಟ್'ಪುಟ್'ನಲ್ಲಿ ಬೆಳ್ಳಿ ಪದಕ ಗೆದ್ದಿರುವುದು, ಇನ್ನು ಜಾವೆಲಿನ್ ಎಸೆತದಲ್ಲಿ ವಿಶ್ವದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕ ಗೆದ್ದ ದೇವೇಂದ್ರ ಜಜೂರಿಯಾ ಕಣ್ಣಲ್ಲಿ ಕಾಣುವ ಸಂತೋಷ, ಅವರ ಛಲ ಕ್ರೀಡಾಬಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದಂತೂ ಸುಳ್ಳಲ್ಲ.

ಗ್ಲಾಮರ್'ಗಳುಳ್ಳ ಕ್ರೀಡಾಪಟುಗಳಿಗೆ ಜಾಹಿರಾತು ಉದ್ಯಮ ರೆಡ್ ಕಾರ್ಪೆಟ್ ಹಾಸಿ ಕೋಟಿ-ಕೋಟಿ ಸುರಿಯಲು ಸಿದ್ದವಿದೆ, ಆದರೆ ಪ್ಯಾರಾಲಿಂಪಿಕ್ಸ್ ಗೆದ್ದ ಕ್ರೀಡಾಪಟುಗಳೇಕೆ ಜಾಹಿರಾತುದಾರರ ಪಾಲಿಗೆ ಐಕಾನ್ ಆಗುವುದಿಲ್ಲ. ಅವರನ್ನು ಗುರುತಿಸುವ ನಮ್ಮ ವ್ಯವಸ್ಥೆಗೆ ನಿಜಕ್ಕೂ ಅಂಗವಿಕಲತೆ ಬಡಿದಿದೆ. ಈ ಬಾರಿ ರಿಯೊ ಒಲಿಂಪಿಕ್ಸ್'ನಲ್ಲಿ ದೇಶಕ್ಕಿಂತ ತಮ್ಮ ವೈಯುಕ್ತಿಕ ಹಿತಾಸಕ್ತಿಯನ್ನೇ ಕೆಲವು ಕ್ರೀಡಾಪಟುಗಳು ಸಾಧಿಸಿಬಿಟ್ಟರು. ದೇಶಕ್ಕಾಗಿ ಒಮ್ಮೆ ಒಲಿಂಪಿಕ್ಸ್'ನಲ್ಲಿ ಭಾಗವಹಿಸಬೇಕು, ಪದಕ ಗೆದ್ದುಕೊಡಬೇಕು ಎಂದು ಹಂಬಲಿಸುವ ಮನಸ್ಸುಗಳ ನಡುವೆ ಸಿಕ್ಕ ಅವಕಾಶವನ್ನು ವೈಯುಕ್ತಿಕ ಮೇಲಾಟಗಳಿಗೆ ಬಳಿಸಿಕೊಂಡ ಕೆಲವು ಕ್ರೀಡಾಪಟುಗಳನ್ನು ಕಂಡರೆ ನಾಚಿಕೆಯಾಗುತ್ತಿದೆ.

125 ಕೋಟಿಗೂ ಅಧಿಕ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಆದರೆ ಅವರನ್ನು ಗುರುತಿಸಿ ಅವಕಾಶ ನೀಡುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಕ್ರೀಡೆಯಲ್ಲಿ ಮೊದಲು ರಾಜಕೀಯ ತೊಲಗಬೇಕು ಆಗ ಮಾತ್ರ ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ.