ನವದೆಹಲಿ[ಮಾ.19] ಕಳೆದ ಏಳೆಂಟು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದರೂ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿಯೇ ಮುಂದುವರೆಸಿರುವ ಆರ್’ಸಿಬಿ ಫ್ರಾಂಚೈಸಿಗೆ ವಿರಾಟ್ ಕೊಹ್ಲಿ ಕೃತಜ್ಞರಾಗಿರಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

ಟೀಕಾಕಾರರ ಕಾಲೆಳೆದ ಗೌತಮ್ ಗಂಭೀರ್

ಮೊದಲಿನಿಂದಲೂ ಕೊಹ್ಲಿ-ಗಂಭೀರ್ ಸಂಬಂಧ ಅಷ್ಟೇನು ಚೆನ್ನಾಗಿಲ್ಲ, 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಗೌತಿ-ಕೊಹ್ಲಿ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಕೆಕೆಆರ್ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗಂಭೀರ್ ಇದೀಗ ಕೊಹ್ಲಿ ಕಾಲೆಳೆದಿದ್ದಾರೆ. 

ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಗಂಭೀರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಟ್ರೋಫಿ ಗೆಲ್ಲದಿದ್ದರೂ ಇಷ್ಟು ವರ್ಷ ನಾಯಕನಾಗಿ ಉಳಿದುಕೊಂಡಿರುವುದೇ ಅವರ ಅದೃಷ್ಟ. ಹೀಗಾಗಿ ಆರ್’ಸಿಬಿ ಫ್ರಾಂಚೈಸಿಗೆ ಕೊಹ್ಲಿ ಧನ್ಯವಾದ ಹೇಳಬೇಕು ಎಂದು ಹೇಳಿದ್ದಾರೆ. 

ಕೊಹ್ಲಿ ನಾಯಕತ್ವವನ್ನು ಚೆನ್ನೈ ಸೂಪರ್’ಕಿಂಗ್ಸ್ ನಾಯಕ ಧೋನಿ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಹೋಲಿಸಲು ಸಾಧ್ಯವಿಲ್ಲ. ಧೋನಿ ಹಾಗೂ ರೋಹಿತ್ ತಮ್ಮ ತಂಡಗಳ ಪರವಾಗಿ ಮೂರು ಕಪ್ ಜಯಿಸಿದ್ದಾರೆ. ಈ ನಿಟ್ಟಿನಲ್ಲಿ ಆರ್’ಸಿಬಿ ನಾಯಕ ಇನ್ನಷ್ಟು ದೂರ ಕ್ರಮಿಸಬೇಕಿದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. 

ಕಳೆದ ಕೆಲದಿನಗಳ ಹಿಂದಷ್ಟೇ ನಾಯಕ ವಿರಾಟ್ ಕೊಹ್ಲಿ, ಕೆಟ್ಟ ನಿರ್ಣಯಗಳಿಂದಾಗಿ ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡಿದ್ದರು. ಇದೀಗ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇದೇ ಮಾರ್ಚ್ 23ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ.