ಡೆಹ್ರಾಡೂನ್[ಫೆ.24]: ಹಜರತುಲ್ಲಾ ಝಝಾಯಿ ಸಿಡಿಲಬ್ಬರದ ಶತಕದ ನೆರವಿನಿಂದ ಆಫ್ಘಾನಿಸ್ತಾನ ತಂಡವು ಐರ್ಲೆಂಡ್ ಎದುರು ಭರ್ಜರಿ ಜಯ ಸಾಧಿಸಿತು. ಇದಷ್ಟೇ ಅಲ್ಲದೇ ಟಿ20 ಕ್ರಿಕೆಟ್’ನಲ್ಲಿ ಆಫ್ಘಾನಿಸ್ತಾನ ಹೊಸ ವಿಶ್ವ ದಾಖಲೆ ಬರೆಯಿತು. ಐರ್ಲೆಂಡ್‌ ವಿರುದ್ಧ ಶನಿವಾರ ಇಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಆಫ್ಘಾನಿಸ್ತಾನ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 278 ರನ್‌ ಗಳಿಸಿತು. 2013ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ 5 ವಿಕೆಟ್‌ಗೆ 263 ರನ್‌ ಹಾಗೂ 2016ರಲ್ಲಿ ಆಸ್ಪ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ 3 ವಿಕೆಟ್‌ಗೆ 263 ರನ್‌ ಬಾರಿಸಿ ವಿಶ್ವ ದಾಖಲೆ ಬರೆದಿದ್ದವು. ಆ ದಾಖಲೆಯನ್ನು ಆಫ್ಘನ್‌ ತಂಡ ಮುರಿದಿದೆ.

ಮೊದಲು ಬ್ಯಾಟ್‌ ಮಾಡಿದ ಆಷ್ಘಾನಿಸ್ತಾನಕ್ಕೆ ಹಜರತುಲ್ಲಾ ಝಝಾಯಿ ಹಾಗೂ ಉಸ್ಮಾನ್‌ ಘನಿ (73) ಮೊದಲ ವಿಕೆಟ್‌ಗೆ 236 ರನ್‌ ಜೊತೆಯಾಟವಾಡಿದರು. ಟಿ20ಯಲ್ಲಿ ಯಾವುದೇ ವಿಕೆಟ್‌ಗೆ ಇದು ಗರಿಷ್ಠ ರನ್‌ ಜೊತೆಯಾಟ ಎನ್ನುವ ದಾಖಲೆ ನಿರ್ಮಿಸಿತು. ಹಜರತುಲ್ಲಾ ಕೇವಲ 62 ಎಸೆತಗಳಲ್ಲಿ ಅಜೇಯ 162 ರನ್‌ ಸಿಡಿಸಿ, ಅಂತಾರಾಷ್ಟ್ರೀಯ ಟಿ20ಯಲ್ಲಿ 2ನೇ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, 16 ಸಿಕ್ಸರ್‌ಗಳಿದ್ದವು. ಅಂತಾರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ದಾಖಲೆ ಹಜರತುಲ್ಲಾ ಪಾಲಾಯಿತು. ಇಷ್ಟಲ್ಲದೆ ಆಫ್ಘನ್‌ ಇನ್ನಿಂಗ್ಸ್‌ ಒಟ್ಟು 22 ಸಿಕ್ಸರ್‌ಗಳಿಂದ ಕೂಡಿತ್ತು. ಅಂ.ರಾ.ಟಿ20ಯಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಸಿಕ್ಸರ್‌ ದಾಖಲೆ ಇದು.

ಬೃಹತ್‌ ಗುರಿ ಬೆನ್ನತ್ತಿದ ಐರ್ಲೆಂಡ್‌ ಸ್ಫೋಟಕ ಆರಂಭ ಪಡೆದರೂ, ಗೆಲುವಿನ ಸನಿಹಕ್ಕೆ ಬರಲು ಸಾಧ್ಯವಾಗಲಿಲ್ಲ. 20 ಓವರಲ್ಲಿ 6 ವಿಕೆಟ್‌ಗೆ 194 ರನ್‌ ಗಳಿಸಿ, 84 ರನ್‌ ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿ 2-0ಯಲ್ಲಿ ಆಫ್ಘನ್‌ ಪಾಲಾಯಿತು.

ಸ್ಕೋರ್‌: ಆಫ್ಘಾನಿಸ್ತಾನ 278/3,

ಐರ್ಲೆಂಡ್‌ 194/6