ಪಾಂಡ್ಯ ವಿಶ್ವದಾಖಲೆಗೆ 3 ರನ್ನಿಂದ ವಂಚಿತರಾದರು. ಬ್ರಿಯಾನ್ ಲಾರಾ ಮತ್ತು ಟ್ರೆವೋರ್ ಬೈಲೀ ಒಂದೇ ಓವರ್'ನಲ್ಲಿ 28 ರನ್ ಗಳಿಸಿರುವುದು ವಿಶ್ವದಾಖಲೆಯಾಗಿ ಉಳಿದಿದೆ. ಶಾಹಿದ್ ಅಫ್ರಿದಿ 27 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಈಗ ಹಾರ್ದಿಕ್ ಪಾಂಡ್ಯ ಈ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.

ಪಲ್ಲೆಕೆಲೆ(ಆ. 13): ಇತ್ತೀಚೆಗೆ ಭಾರತದ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮಿರುವ ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ ಇಂದು ಮತ್ತೊಮ್ಮೆ ಆರ್ಭಟಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಪಾಂಡ್ಯ ತಮ್ಮ ಚೊಚ್ಚಲ ಟೆಸ್ಟ್ ಶತಕ ದಾಖಲಿಸಿದ್ದಾರೆ. ಈ ಹಾದಿಯಲ್ಲಿ ಅವರು ಒಂದೇ ಓವರ್'ನಲ್ಲಿ 26 ರನ್ ಸಿಡಿಸಿದ್ದಾರೆ. ಈ ಮೂಲಕ ಹೊಸ ಭಾರತೀಯ ದಾಖಲೆ ಸ್ಥಾಪಿಸಿದ್ದಾರೆ. ಭಾರತದ ಇನ್ನಿಂಗ್ಸ್'ನ 116ನೇ ಓವರ್'ನಲ್ಲಿ ಸ್ಕೋರು 9 ವಿಕೆಟ್ ನಷ್ಟಕ್ಕೆ 430 ರನ್ ಇದ್ದಾಗ ಪಾಂಡ್ಯ ಅವರ ಸ್ಫೋಟಕ ಆಟ ಬಂದಿದೆ. ಪುಷ್ಪಕುಮಾರ ಮಾಡಿದ ಆ 116ನೇ ಓವರ್'ನಲ್ಲಿ ಪಾಂಡ್ಯ 4, 4, 6, 6, 6, 0 ರನ್ ಚಚ್ಚಿದ್ದಾರೆ. ಮೊದಲೆರಡು ಎಸೆತಗಳು ಬೌಂಡರಿ ಕಂಡರೆ, ಆಮೇಲಿನ ಸತತ 3 ಎಸೆತಗಳು ಸಿಕ್ಸರ್ ಆಗಿವೆ.

ಒಂದೇ ಓವರ್'ನಲ್ಲಿ ಅತೀ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯರ ಪೈಕಿ ಈಗ ಹಾರ್ದಿಕ್ ಪಂಡ್ಯ ಅಗ್ರಸ್ಥಾನ ಪಡೆದಿದ್ದಾರೆ. ಸಂದೀಪ್ ಪಾಟೀಲ್ ಮತ್ತು ಕಪಿಲ್ ದೇವ್ ಇಬ್ಬರೂ 24 ರನ್ ಗಳಿಸಿದ್ದು ಈವರೆಗಿನ ಭಾರತೀಯ ದಾಖಲೆಯಾಗಿತ್ತು.

ಆದರೆ, ಪಾಂಡ್ಯ ವಿಶ್ವದಾಖಲೆಗೆ 3 ರನ್ನಿಂದ ವಂಚಿತರಾದರು. ಬ್ರಿಯಾನ್ ಲಾರಾ ಮತ್ತು ಟ್ರೆವೋರ್ ಬೈಲೀ ಒಂದೇ ಓವರ್'ನಲ್ಲಿ 28 ರನ್ ಗಳಿಸಿರುವುದು ವಿಶ್ವದಾಖಲೆಯಾಗಿ ಉಳಿದಿದೆ. ಶಾಹಿದ್ ಅಫ್ರಿದಿ 27 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಈಗ ಹಾರ್ದಿಕ್ ಪಾಂಡ್ಯ ಈ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.

ಒಂದೇ ಓವರ್'ನಲ್ಲಿ ಅತೀ ಹೆಚ್ಚು ರನ್'ಗಳ ದಾಖಲೆ:

ಭಾರತೀಯರು:
1) ಹಾರ್ದಿಕ್ ಪಾಂಡ್ಯ: 26 ರನ್
2) ಸಂದೀಪ್ ಪಾಟೀಲ್: 24 ರನ್
3) ಕಪಿಲ್ ದೇವ್: 24 ರನ್

ವಿಶ್ವದಾಖಲೆ:
1) ಬ್ರಿಯಾನ್ ಲಾರಾ: 28 ರನ್
2) ಟ್ರೆವೋರ್ ಬೈಲೀ: 28 ರನ್
3) ಶಾಹಿದ್ ಅಫ್ರಿದಿ: 27 ರನ್
4) ಹಾರ್ದಿಕ್ ಪಾಂಡ್ಯ: 26 ರನ್

ಇದೇ ವೇಳೆ, ಹಾರ್ದಿಕ್ ಪಾಂಡ್ಯ ಚೊಚ್ಚಲ ಟೆಸ್ಟ್ ಶತಕವನ್ನೂ ದಾಖಲಿಸಿದ್ದಾರೆ. 96 ಎಸೆತಗಳಲ್ಲಿ ಅವರು 108 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿ ಒಳಗೊಂಡಿವೆ. ಉಮೇಶ್ ಯಾದವ್ ಜೊತೆ ಹಾರ್ದಿಕ್ ಪಾಂಡ್ಯ ಕೊನೆಯ ವಿಕೆಟ್'ಗೆ 66 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಪರಿಣಾಮ ಭಾರತದ ಮೊದಲ ಇನ್ನಿಂಗ್ಸ್ ಮೊತ್ತ 487 ರನ್'ಗೆ ಏರಿತು.

ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲೂ ಪ್ರಾಬಲ್ಯ ಮುಂದುವರಿಸಿರುವ ಭಾರತ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಇದೆ.