29 ವರ್ಷದ ಗುರುದಾಸ್ ರಾವತ್'ಗೆ ಎಡಗೈ ಇಲ್ಲವೇ ಇಲ್ಲ. ಆದರೂ ಕ್ರಿಕೆಟ್ ಆಡುತ್ತಾನೆ. ಈತ ಭಾರತ ಅಂಗವಿಕಲ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಆಲ್'ರೌಂಡರ್. ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವ ಗುರುದಾಸ್ ರಾವತ್'ಗೆ ಕ್ರಿಕೆಟ್ ಅಂದ್ರೆ ಭಾರೀ ಪ್ರೀತಿ; ಆದರೆ, ಆಟಗಾರನಾಗುವ ಮುನ್ನ ಆತ ಎದುರಿಸಿದ ಅಡೆತಡೆಗಳು ಅಷ್ಟಿಷ್ಟಲ್ಲ.

ನವದೆಹಲಿ(ಸೆ. 30): ಈತನ ಬೌಲಿಂಗ್'ನಲ್ಲಿ ಸಚಿನ್ ತೆಂಡೂಲ್ಕರ್ ಕ್ಲೀನ್ ಬೌಲ್ಡ್ ಆಗಿದ್ದಾರೆ; ಹರಿಣಗಳ ತಂಡದ ಸ್ಫೋಟಕ ಬ್ಯಾಟುಗಾರ ಡೇವಿಡ್ ಮಿಲ್ಲರ್ ಭಾರಿಸಿದ ಚೆಂಡನ್ನು ಈತ ಬೌಂಡರಿ ಲೈನ್'ನಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದ್ದಾನೆ; ಇರ್ಫಾನ್ ಪಠಾನ್ ಬೌಲಿಂಗ್'ನಲ್ಲಿ ಬೌಂಡರಿ ಚಚ್ಚಿದ್ದಾನೆ.... ಈಗ ವಿರಾಟ್ ಕೊಹ್ಲಿಗೆ ತನ್ನ ಬೌಲಿಂಗ್ ಎದುರಿಸಲು ಚಾಲೆಂಜ್ ಹಾಕಿದ್ದಾನೆ... ಈತನ ಹೆಸರು ಗುರುದಾಸ್ ರಾವತ್...

ಇದರಲ್ಲೇನು ವಿಶೇಷ ಎನ್ನುತ್ತೀರಾ..? ವಿಶೇಷತೆ ಇದೆ... 29 ವರ್ಷದ ಗುರುದಾಸ್ ರಾವತ್'ಗೆ ಎಡಗೈ ಇಲ್ಲವೇ ಇಲ್ಲ. ಆದರೂ ಕ್ರಿಕೆಟ್ ಆಡುತ್ತಾನೆ. ಈತ ಭಾರತ ಅಂಗವಿಕಲ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಆಲ್'ರೌಂಡರ್. ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವ ಗುರುದಾಸ್ ರಾವತ್'ಗೆ ಕ್ರಿಕೆಟ್ ಅಂದ್ರೆ ಭಾರೀ ಪ್ರೀತಿ; ಆದರೆ, ಆಟಗಾರನಾಗುವ ಮುನ್ನ ಆತ ಎದುರಿಸಿದ ಅಡೆತಡೆಗಳು ಅಷ್ಟಿಷ್ಟಲ್ಲ.

ವಿಶೇಷ ಚೇತನದ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಏನೆಲ್ಲಾ ಅವಮಾನ, ಕೀಳರಿಮೆಯನ್ನು ಅನುಭವಿಸಬೇಕಾಗುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವಂಥದ್ದೇ. ಟೆಲಿವಿಷನ್'ನಲ್ಲಿ ಕ್ರಿಕೆಟ್ ನೋಡುತ್ತಿದ್ದ ಗುರುದಾಸ್ ರಾವತ್'ಗೆ ಕ್ರಿಕೆಟ್ ಆಡುವ ಆಸೆ ಪ್ರಾರಂಭವಾದೊಡನೆಯೇ ಅವಹೇಳನಗಳೂ ಶುರುವದವು. ಒಂದು ಕೈ ಇಲ್ಲ. ಕ್ರಿಕೆಟ್ ಆಡಿದ್ರೆ ಮತ್ತೊಂದು ಕೈ ಕಳೆದುಕೊಳ್ಳಬೇಕಾಗುತ್ತದೆ. ಸುಮ್ಮನೆ ತೆಪ್ಪಗೆ ಇರು ಎಂಬಂತಹ ಮಾತುಗಳು ರಾವತ್'ರನ್ನು ಚುಚ್ಚತೊಡಗಿದ್ದವು. ಇಷ್ಟಾದರೂ ಎದೆಗುಂದದ ರೈತನ ಮಗ ಕ್ರಿಕೆಟ್ ಬ್ಯಾಟು ಬಾಲು ಹಿಡಿದು ಛಲದಂಕಮಲ್ಲನಂತೆ ಆರ್ಭಟಿಸಿದ. ಭಾರತ ತಂಡದ ಪರ ಅನೇಕ ಪಂದ್ಯಗಳನ್ನು ಗೆಲ್ಲಿಸಿದ.

ಅಂಗವಿಕಲ ಕ್ರಿಕೆಟಿಗರಿಗೆ ಆಡಲು ಹೆಚ್ಚು ಪಂದ್ಯಗಳಿರುವುದಿಲ್ಲ. ಹೀಗಾಗಿ, ಸಾಕಷ್ಟು ಬಿಡುವು ಹೊಂದಿರುವ ಈತ ವಿವಿಧ ತಂಡಗಳ ಆಟಗಾರರಿಗೆ ನೆಟ್ ಪ್ರಾಕ್ಟೀಸ್'ನಲ್ಲಿ ಸಹಾಯ ಮಾಡುತ್ತಾನೆ. ಇಂತಹ ನೆಟ್ ಪ್ರಾಕ್ಟೀಸ್ ವೇಳೆ ಸಚಿನ್ ಮೊದಲಾದವರಿಗೆ ಬೌಲಿಂಗ್ ಮಾಡುವ ಅವಕಾಶ ಪಡೆಯುತ್ತಾನೆ. ದಕ್ಷಿಣ ಆಫ್ರಿಕಾ ಮೊದಲಾದ ತಂಡಗಳ ಪ್ರಾಕ್ಟೀಸ್ ಗೇಮ್'ನಲ್ಲೂ ಈತ ಭಾಗವಹಿಸುತ್ತಾನೆ. ಇದೀಗ ವಿರಾಟ್ ಕೊಹ್ಲಿಗೂ ಬೌಲಿಂಗ್ ಮಾಡುವ ಇಚ್ಛೆ ಹೊಂದಿದ್ದಾನೆ.