ಐಪಿಎಲ್'ಗೆ ಪಾದಾರ್ಪಣೆ ಮಾಡಿದ ಆಸ್ಟ್ರೇಲಿಯಾ ಮೂಲದ ಬೌಲರ್ ಆ್ಯಂಡ್ರೂ ಟೈ 20ನೇ ಓವರ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿ ಮಿಂಚಿದರು.

ರಾಜ್'ಕೋಟ್(ಏ.14): ಸತತ ಸೋಲಿನಿಂದ ಕಂಗೆಟ್ಟಿದ್ದ ಗುಜರಾತ್ ಲಯನ್ಸ್ ಸಂಘಟಿತ ಪ್ರದರ್ಶನ ತೋರುವ ಮೂಲಕ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ವಿರುದ್ಧ 7 ವಿಕೆಟ್'ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್ ಲಯನ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ಓವರ್'ನಲ್ಲೇ ಅಜಿಂಕ್ಯ ರಹಾನೆ ಬ್ಯಾಟ್ ಸವರಿದ ಚೆಂಡನ್ನು ಸುರೇಶ್ ರೈನಾ ಅದ್ಭುತವಾಗಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ವಿಕೆಟ್'ಗೆ ನಾಯಕ ಸ್ಮಿತ್ ಹಾಗೂ ರಾಹುಲ್ ತಿರುಪತಿ 64 ರನ್ ಕಲೆಹಾಕುವಲ್ಲಿ ಸಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್, ಮನೋಜ್ ತಿವಾರಿ ಹಾಗೂ ಅಂಕಿತ್ ಶರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪುಣೆ ಸೂಪರ್'ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು.

ಐಪಿಎಲ್'ಗೆ ಪಾದಾರ್ಪಣೆ ಮಾಡಿದ ಆಸ್ಟ್ರೇಲಿಯಾ ಮೂಲದ ಬೌಲರ್ ಆ್ಯಂಡ್ರೂ ಟೈ 20ನೇ ಓವರ್'ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿ ಮಿಂಚಿದರು. ಟೈ ತಮ್ಮ ನಾಲ್ಕು ಓವರ್'ನ ಸ್ಪೆಲ್'ನಲ್ಲಿ ಕೇವಲ 17ರನ್ ನೀಡಿ 5 ವಿಕೆಟ್ ಪಡೆಯುವಲ್ಲಿ ಸಫಲರಾದರು.

ಪುಣೆ ನೀಡಿದ ಸವಾಲಿನ ಗುರಿ ಬೆನ್ನತ್ತಿದ ಗುಜರಾತ್ ಲಯನ್ಸ್ ಪಡೆ ಭರ್ಜರಿ ಆರಂಭವನ್ನೇ ಪಡೆಯಿತು.ಕೇವಲ 8.5 ಓವರ್'ನಲ್ಲಿ ಡ್ವೇನ್ ಸ್ಮಿತ್ ಹಾಗೂ ಬ್ರೆಂಡನ್ ಮೆಕ್ಲಮ್ ಜೋಡಿ 94ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಗುಜರಾತ್ ಲಯನ್ಸ್ ಆರಂಭಿಕ ಆಟಗಾರರಿಬ್ಬರೂ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ಡ್ವೇನ್ ಸ್ಮಿತ್ 47ರನ್ ಬಾರಿಸಿ ಶಾರ್ದೂಲ್ ಠಾಕೂರ್'ಗೆ ವಿಕೆಟ್ ಒಪ್ಪಿಸಿದರೆ, ಬ್ರೆಂಡನ್ ಮೆಕ್ಲಮ್ 49ರನ್ ಬಾರಿಸಿ ಧೋನಿಯ ಚುರುಕಿನ ಕೈಚಳಕದಿಂದ ಸ್ಟಂಪ್'ಔಟ್ ಆಗಿ ಹೊರನಡೆದರು. ಇನ್ನು 150ನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ನಾಯಕ ಸುರೇಶ್ ರೈನಾ(35)ಹಾಗೂ ಆ್ಯರೋನ್ ಫಿಂಚ್(33) ಜೋಡಿ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಜಯದ ನಗೆ ಬೀರುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್:

ರೈಸಿಂಗ್ ಪುಣೆ ಸೂಪರ್'ಜೈಂಟ್ಸ್: 171/8

ಸ್ಟೀವ್ ಸ್ಮಿತ್: 43

ರಾಹುಲ್ ತಿರುಪತಿ: 33

ಆ್ಯಂಡ್ರೂ ಟೈ: 17/5

ಗುಜರಾತ್ ಲಯನ್ಸ್: 172/3

ಬ್ರೆಂಡನ್ ಮೆಕ್ಲಮ್: 49

ಡ್ವೇನ್ ಸ್ಮಿತ್: 47

ಶಾರ್ದೂಲ್ ಠಾಕೂರ್: 14/1