ಕೊಲಂಬೊ(ಜು.22]: ಶ್ರೀಲಂಕಾದ ಗಾಲೆಯಲ್ಲಿರುವ ಐತಿಹಾಸಿಕ ಕ್ರಿಕೆಟ್ ಕ್ರೀಡಾಂಗಣ ಸದ್ಯದಲ್ಲೇ ನೆಲಸಮಗೊಳ್ಳಲಿದೆ. ವಿಶ್ವದ ಅತ್ಯಂತ ಸುಂದರ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಗಾಲೆ ಕ್ರೀಡಾಂಗಣ ಈ ವರ್ಷಾಂತ್ಯದಲ್ಲಿ ತೆರವುಗೊಳ್ಳಲಿದೆ. ನವೆಂಬರ್‌ನಲ್ಲಿ ಇಂಗ್ಲೆಂಡ್ ತಂಡ ಲಂಕಾ ಪ್ರವಾಸ ಕೈಗೊಳ್ಳಲಿದ್ದು, ಈ ಕ್ರೀಡಾಂಗಣದಲ್ಲಿ ಆಡಲಿರುವ ಬಹುತೇಕ ಕೊನೆ ತಂಡವೆನಿಸಲಿದೆ. 

ಕಾರಣವೇನು?: ಹಿಂದೂ ಮಹಾಸಾಗರಕ್ಕೆ ಅಂಟಿಕೊಂಡಂತಿರುವ ಕ್ರೀಡಾಂಗಣದ ಪೆವಿಲಿಯನ್ ಹಿಂದೆಯೇ 17ನೇ ಶತಮಾನದಲ್ಲಿ ಡಚ್ಚರು ನಿರ್ಮಿಸಿದ ಕೋಟೆ ಇದೆ. ಪಾರಂಪರಿಕ ಕಟ್ಟಡಗಳ ನಿಯಮಕ್ಕೆ ವಿರುದ್ಧವಾಗಿ ಪೆವಿಲಿಯನ್ ನಿರ್ಮಾಣಗೊಂಡಿರುವ ಕಾರಣ, ಅದನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದೊಮ್ಮೆ ಕ್ರೀಡಾಂಗಣ ತೆರವು ಮಾಡದಿದ್ದರೆ, ಈ ಕೋಟೆ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನ ಕಳೆದುಕೊಳ್ಳಲಿದೆ. ಹೀಗಾಗಿ ಶ್ರೀಲಂಕಾ ಸರ್ಕಾರ, ಕ್ರೀಡಾಂಗಣವನ್ನು ನೆಲಸಮಗೊಳಿಸಿ, ಯುನೆಸ್ಕೋ ಸ್ಥಾನ ಉಳಿಸಿಕೊಳ್ಳಲು ನಿರ್ಧರಿಸಲಿದೆ.

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ ಕ್ರೀಡಾಂಗಣ:

1998ರಿಂದ ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿದ್ದು, ಶ್ರೀಲಂಕಾ ಇಲ್ಲಿ ಆಡಿದ ಬಹುತೇಕ ಪಂದ್ಯಗಳನ್ನು ಗೆದ್ದಿದೆ. ಈ ಕ್ರೀಡಾಂಗಣ ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. 2010ರಲ್ಲಿ ಮುತ್ತಯ್ಯ ಮುರಳೀಧರನ್ ತಮ್ಮ 800ನೇ ಟೆಸ್ಟ್ ವಿಕೆಟ್ ಪಡೆದಿದ್ದು ಇದೇ ಕ್ರೀಡಾಂಗಣದಲ್ಲಿ. ಇದಕ್ಕೆ 6 ವರ್ಷಗಳ ಮೊದಲು ಆಸ್ಟ್ರೇಲಿಯಾದ ಸ್ಪಿನ್ ದೊರೆ ಶೇನ್ ವಾರ್ನ್ ತಮ್ಮ 500ನೇ ಟೆಸ್ಟ್ ವಿಕೆಟನ್ನು ಇಲ್ಲಿಯೇ ಕಬಳಿಸಿದ್ದರು. ಕಳೆದ ವಾರವಷ್ಟೇ ಶ್ರೀಲಂಕಾ, ದ.ಆಫ್ರಿಕಾ ವಿರುದ್ಧ 278 ರನ್'ಗಳ ಭರ್ಜರಿ ಗೆಲುವು ದಾಖಲಿಸಿತ್ತು. 

ಸುನಾಮಿಯಿಂದ ಛಿದ್ರಗೊಂಡಿದ್ದ ಕ್ರೀಡಾಂಗಣ 2004ರಲ್ಲಿ ಸುನಾಮಿಯಿಂದಾಗಿ ಗಾಲೆ ಕ್ರೀಡಾಂಗಣ ಛಿದ್ರಗೊಂಡಿತ್ತು. ಬಳಿಕ 2008ರಲ್ಲಿ ಇಲ್ಲಿ ಪೆವಿಲಿಯನ್ ನಿರ್ಮಾಣ ಮಾಡಲಾಯಿತು. ಕ್ರೀಡಾಂಗಣದ ಜೀರ್ಣೋದ್ಧಾರಕ್ಕಾಗಿ ಶ್ರೀಲಂಕಾ ಕ್ರಿಕೆಟಿಗರು ದೊಡ್ಡ ಮಟ್ಟದಲ್ಲಿ ನೆರವಾಗಿದ್ದರು. ದೇಣಿಗೆ ಸಂಗ್ರಹಕ್ಕಾಗಿ ಸಹಾಯಾರ್ಥ ಪಂದ್ಯವೊಂದು ಸಹ ನಡೆದಿತ್ತು.