ಇತ್ತೀಚಿಗಷ್ಟೇ ನಡೆದ ಕನೆಕ್ಟಿಕಟ್ ಟೆನಿಸ್ ಟ್ರೋಫಿ ಜಯಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ನೂತನ ಜೊತೆಗಾರ್ತಿ ಜೆಕ್ ರಿಪಬ್ಲಿಕ್‌ನ ಬಾರ್ಬೊರಾ ಸ್ಟ್ರೈಕೊವಾ, ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಹಾಗೆ ಭಾರತದ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಅವರ ಪ್ರತ್ಯೇಕ ಜೋಡಿ ಕೂಡ ಮೊದಲ ಸುತ್ತಿನಲ್ಲಿ ಜಯದೊಂದಿಗೆ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್ ರಿಪಬ್ಲಿಕ್‌ನ ಬಾರ್ಬೊರಾ ಸ್ಟ್ರೈಕೊವಾ ಜೋಡಿ 6-3, 6-2 ಸೆಟ್‌ಗಳಿಂದ ಅಮೆರಿಕದ ಜಡ ಮೈ ಹಾರ್ಟ್ ಮತ್ತು ಎನಾ ಶಿಬಾರಾ ಜೋಡಿ ಎದುರು ಗೆಲುವು ಪಡೆದು ಮುಂದಿನ ಸುತ್ತು ಪ್ರವೇಶಿಸಿತು.

2ನೇ ಸುತ್ತಿಗೆ ಬೋಪಣ್ಣ ಜೋಡಿ:

ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಡೆನ್ಮಾರ್ಕ್‌ನ ಫ್ರೆಡ್ರಿಕ್ ನೆಲ್ಸನ್ ಜೋಡಿ 6-3, 6-7(3), 6-3 ಸೆಟ್‌ಗಳಿಂದ 16ನೇ ಶ್ರೇಯಾಂಕಿತ ಜೆಕ್ ರಿಪಬ್ಲಿಕ್‌ನ ರಾಡೆಕ್ ಸ್ಟೆಫಾನಕ್ ಮತ್ತು ಸರ್ಬಿಯಾದ ನೆನಾದ್ ಜಿಮಾಂಜಿಕ್ ಜೋಡಿಯ ಎದುರು ಪ್ರಯಾಸದ ಜಯ ಸಾಧಿಸಿ ಎರಡನೇ ಸುತ್ತಿಗೆ ಮುಂದಡಿ ಇಟ್ಟಿತು. ಇಂಡೋ-ಡೆನ್ಮಾರ್ಕ್ ಜೋಡಿ ಮುಂದಿನ ಪಂದ್ಯದಲ್ಲಿ ಅಮೆರಿಕದ ಬ್ರೈನ್ ಬೇಕರ್ ಮತ್ತು ನ್ಯೂಜಿಲೆಂಡ್‌ನ ಮಾರ್ಕಸ್ ಡೇನಿಲ್ ಜೋಡಿಯನ್ನು ಎದುರಿಸಲಿದ್ದಾರೆ.

ಪೇಸ್ ಜೋಡಿಗೆ ಜಯ:

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಸ್ವಿಟ್ಜರ್‌ಲೆಂಡಿನ ಮಾರ್ಟಿನಾ ಹಿಂಗಿಸ್ ಜೋಡಿ 6-3, 6-2ಸೆಟ್‌ಗಳಿಂದ ಅಮೆರಿಕದ ಸಚಿಯಾ ವಿಕ್ರೆ ಮತ್ತು ಫ್ರಾನ್ಸಿನ್ ಟೈಫೋಯಿ ವಿರುದ್ಧ ಗೆಲುವಿನೊಂದಿಗೆ 2ನೇ ಸುತ್ತು ಪ್ರವೇಶಿಸಿತು. ಕೇವಲ 51 ನಿಮಿಷಗಳ ಕಾಲ ನಡೆದ ಆಟದಲ್ಲಿ ಇಂಡೋ-ಸ್ವಿಸ್ ಜೋಡಿ ಪ್ರಭಾವಿ ಆಟದ ಮೂಲಕ ಗಮನಸೆಳೆಯಿತು.