ನವದೆಹಲಿ(ನ.05): ದೆಹಲಿ ರಣಜಿ ತಂಡದ ನಾಯಕತ್ವದಿಂದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಕೆಳಗಿಳಿದಿದ್ದಾರೆ. ಯುವಕರಿಗೆ ಅವಕಾಶ ಹಾಗೂ ಯುವ ನಾಯಕರನ್ನ ಬೆಳೆಸುವ ನಿಟ್ಟಿನಲ್ಲಿ ಗೌತಮ್ ಗಂಭೀರ್ ಈ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಇದೀಗ ದೆಹಲಿ ತಂಡಕ್ಕೆ ಹೊಸ ನಾಯಕನನ್ನ ಆಯ್ಕೆ ಮಾಡಲಾಗಿದೆ.

ಗಂಭೀರ್‌ನಿಂದ ತೆರವಾದ ದೆಹಲಿ ರಣಜಿ ತಂಡದ ನಾಯಕ ಸ್ಥಾನಕ್ಕೆ ಯುವ ಕ್ರಿಕೆಟಿಗ ನಿತೀಶ್ ರಾಣಾ ಆಯ್ಕೆಯಾಗಿದ್ದಾರೆ. ಧ್ರುವ್ ಶೊರೆಯ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ದೆಹಲಿ ಆಯ್ಕೆ ಸಮಿತಿ ಬಳಿಕ ಗಂಭೀರ್ ತಾವು ನಾಯಕತ್ವದಿಂದ ಕೆಳೆಗಿಳಿಯುವುದಾಗಿ ಸೂಚಿಸಿದ್ದರು. ಇಷ್ಟೇ ಅಲ್ಲ, ಯುವಕರಿಗೆ ಅವಕಾಶ ನೀಡೋ ನಿಟ್ಟಿನಲ್ಲಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.

ನೂತನ ನಾಯಕ ನಿತೀಶ್ ರಾಣ 24 ಪ್ರಥಮ ದರ್ಜೆ ಪಂದ್ಯಗಳಿಂದ 1574 ರನ್ ಸಿಡಿಸಿದ್ದಾರೆ. 46.29ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ರಾಣ, 4 ಶತಕ ಹಾಗೂ 6 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.