ಆದಷ್ಟು ಬೇಗ ಲೋಧಾ ಸಮಿತಿಯ ಯಾವೆಲ್ಲಾ ಶಿಫಾರಸುಗಳನ್ನು ಜಾರಿಗೆ ತರಬಹುದು ಎನ್ನುವುದನ್ನು ಅಧ್ಯಯನ ಮಾಡಿ, ಅದಕ್ಕೆ ಸಂಬಂಧಿಸಿದ ಪಟ್ಟಿಯನ್ನು ಜುಲೈ 10ರೊಳಗೆ ಬಿಸಿಸಿಐಗೆ ತಲುಪಿಸುವುದು ವಿಶೇಷ ಸಮಿತಿಯ ಗುರಿಯಾಗಿದೆ.

ನವದೆಹಲಿ(ಜೂ.28): ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಬಿಸಿಸಿಐ ರಚಿಸಿರುವ ವಿಶೇಷ ಸಮಿತಿಯಲ್ಲಿ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಸ್ಥಾನ ಪಡೆದಿದ್ದಾರೆ. ಮಂಗಳವಾರ ರಚನೆಯಾದ 7 ಸದಸ್ಯರ ಸಮಿತಿಯನ್ನು ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್‌ ಶುಕ್ಲಾ ಮುನ್ನಡೆಸಲಿದ್ದಾರೆ.
ಕೆಲ ರಾಜ್ಯ ಸಂಸ್ಥೆಗಳು ಲೋಧಾ ಸಮಿತಿ ಶಿಫಾರಸುಗಳ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಕೇರಳ ಕ್ರಿಕೆಟ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಟಿ.ಸಿ.ಮ್ಯಾಥ್ಯೂ, ಮೆಘಾಲಯ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ನಬ ಭಟ್ಟಾಚಾರ್ಜಿ, ಗುಜರಾತ್‌ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ಪುತ್ರ ಜಯ್‌ ಷಾ, ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿ ಹಾಗೂ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಸಮಿತಿಯಲ್ಲಿರುವ ಇತರೆ ಸದಸ್ಯರಾಗಿದ್ದಾರೆ.

ಆದಷ್ಟು ಬೇಗ ಲೋಧಾ ಸಮಿತಿಯ ಯಾವೆಲ್ಲಾ ಶಿಫಾರಸುಗಳನ್ನು ಜಾರಿಗೆ ತರಬಹುದು ಎನ್ನುವುದನ್ನು ಅಧ್ಯಯನ ಮಾಡಿ, ಅದಕ್ಕೆ ಸಂಬಂಧಿಸಿದ ಪಟ್ಟಿಯನ್ನು ಜುಲೈ 10ರೊಳಗೆ ಬಿಸಿಸಿಐಗೆ ತಲುಪಿಸುವುದು ವಿಶೇಷ ಸಮಿತಿಯ ಗುರಿಯಾಗಿದೆ.

ಜುಲೈ 14ರಂದು ಲೋಧಾ ಸಮಿತಿ ಶಿಫಾರಸು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಈ ವೇಳೆ ಕ್ರಿಕೆಟ್‌ ಮಂಡಳಿ ತಾನು ಕೈಗೊಂಡಿರುವ ತೀರ್ಮಾನವನ್ನು ಪ್ರಕಟಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.