ಕೊಲಂಬೊ[ಏ.05]: ಬುಧವಾರ ರಾತ್ರಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಐಪಿಎಲ್‌ ಪಂದ್ಯದಲ್ಲಿ 3 ವಿಕೆಟ್‌ ಕಿತ್ತು ಮುಂಬೈ ಇಂಡಿಯನ್ಸ್‌ ಗೆಲುವಿಗೆ ನೆರವಾಗಿದ್ದ ಲಸಿತ್‌ ಮಾಲಿಂಗ, ರಾತ್ರೋರಾತ್ರಿ ಮುಂಬೈನಿಂದ ಶ್ರೀಲಂಕಾಕ್ಕೆ ಮರಳಿ ದೇಸಿ ಏಕದಿನ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಮಾಲಿಂಗ ಬುಧವಾರವೇ ಲಂಕಾಕ್ಕೆ ವಾಪಸಾಗಲಿದ್ದು, ಚೆನ್ನೈ ವಿರುದ್ಧ ಐಪಿಎಲ್‌ ಪಂದ್ಯವನ್ನು ಆಡುವುದಿಲ್ಲ ಎನ್ನಲಾಗಿತ್ತು. ಪಂದ್ಯದಲ್ಲಿ ಆಡಿದ ಅವರು ಬಳಿಕ ತವರಿಗೆ ಮರಳಿದ್ದಾರೆ.

ಮುಂಬೈ ಹಾಗೂ ಚೆನ್ನೈ ನಡುವಿನ ಪಂದ್ಯ ಮುಕ್ತಾಯಗೊಂಡಾಗ ರಾತ್ರಿ 11.50 ಆಗಿತ್ತು. ವಿಮಾನದಲ್ಲಿ ಕೊಲಂಬೊ ತಲುಪಿದ ಮಾಲಿಂಗ, ಅಲ್ಲಿಂದ 1 ಗಂಟೆ ರಸ್ತೆ ಮೂಲಕ ಪ್ರಯಾಣ ಮಾಡಿ ಬೆಳಗ್ಗಿನ ಜಾವ 5 ಗಂಟೆ ವೇಳೆಗೆ ಕ್ಯಾಂಡಿ ತಲುಪಿದ್ದಾರೆ. ಆ ನಂತರ ಕ್ಯಾಂಡಿ ತಂಡದ ವಿರುದ್ಧ ಗಾಲೆ ತಂಡವನ್ನು ಮುನ್ನಡೆಸಿದ ಅವರು 9.5 ಓವರ್‌ ಬೌಲಿಂಗ್‌ ಮಾಡಿ 49 ರನ್‌ಗೆ 7 ವಿಕೆಟ್‌ ಕಬಳಿಸಿ ಮಿಂಚಿದರು. ಮಾಲಿಂಗರ ತಂಡ 156 ರನ್‌ ಗೆಲುವು ಸಾಧಿಸಿತು. ಕೇವಲ 16 ಗಂಟೆಗಳೊಳಗಾಗಿ ಮಾಲಿಂಗ 10 ವಿಕೆಟ್ ಪಡೆದು ಮಿಂಚಿದ್ದಾರೆ. ಲಿಸ್ಟ್ ’ಎ’ ಕ್ರಿಕೆಟ್ ಪಂದ್ಯವೊಂದರಲ್ಲಿ 7 ವಿಕೆಟ್ ಕಬಳಿಸಿದ 6ನೇ ನಾಯಕ ಎನ್ನುವ ಕೀರ್ತಿಗೂ ಮಾಲಿಂಗ ಪಾತ್ರರಾಗಿದ್ದಾರೆ. 

ಲಂಕಾ ಏಕದಿನ ವಿಶ್ವಕಪ್‌ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ಮಾಲಿಂಗ, ದೇಸಿ ಟೂರ್ನಿಯಲ್ಲಿ ಆಡಿ ಆಯ್ಕೆಗಾರರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಏ.11ರಂದು ಟೂರ್ನಿ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಅವರು ಐಪಿಎಲ್‌ಗೆ ವಾಪಸಾಗುವ ನಿರೀಕ್ಷೆ ಇದೆ.