French Open 2023: ಕ್ವಾರ್ಟರ್ ಫೈನಲ್‌ಗೆ ಆಲ್ಕರಜ್, ಜಬುರ್ ಲಗ್ಗೆ
ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂನಲ್ಲಿ ಕ್ವಾರ್ಟರ್ ಪ್ರವೇಶಿಸಿದ ವಿಶ್ವ ನಂ.1 ಟೆನಿಸಿಗ
ಸಿಟ್ಸಿಪಾಸ್, ರುಡ್‌ಗೂ ಕ್ವಾರ್ಟರ್‌ಫೈನಲ್ ಟಿಕೆಟ್
ಕ್ವಾರ್ಟರ್‌ನಲ್ಲಿ ಆಲ್ಕರಜ್‌ಗೆ ಸಿಟ್ಸಿಪಾಸ್ ಸವಾಲು
ಪ್ಯಾರಿಸ್(ಜೂ.06): ಟೆನಿಸ್ ಲೋಕದ ಉದಯೋನ್ಮುಖ ಪ್ರತಿಭೆ, ವಿಶ್ವ ನಂ.1 ಆಟಗಾರ ಕಾರ್ಲೋಸ್ ಆಲ್ಕರಜ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ನಲ್ಲಿ ಸತತ 2ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶೀಸಿದ್ದಾರೆ. ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ತವಕದಲ್ಲಿರುವ ಕಳೆದ ಬಾರಿ ರನ್ನರ್-ಅಪ್ ಕ್ಯಾಸ್ಪೆರ್ ರುಡ್, 5ನೇ ಶ್ರೇಯಾಂಕಿತ ಸ್ಟೆಫಾನೊಸ್ ಸಿಟ್ಸಿಪಾಸ್, 7ನೇ ಶ್ರೇಯಾಂಕಿತೆ ಒನ್ಸ್ ಜಬುರ್ ಕೂಡಾ ಅಂತಿಮ 8ರ ಘಟ್ಟತಲುಪಿದ್ದಾರೆ.
ಭಾನುವಾರ ರಾತ್ರಿ ಪುರುಷರ ಸಿಂಗಲ್ಸ್ 4ನೇ ಸುತ್ತಿನ ಹಣಾಹಣಿಯಲ್ಲಿ ಸ್ಪೇನ್‌ನ 20 ವರ್ಷದ ಆಲ್ಕರಜ್, ವಿಶ್ವ ನಂ.17 ಇಟಲಿಯ ಲೊರೆಂಜೊ ಮುಸೆಟ್ಟಿವಿರುದ್ಧ 6-3, 6-2, 6-2 ಸೆಟ್ಗಳಲ್ಲಿ ಜಯಭೇರಿ ಬಾರಿಸಿದರು. 2021ರ ರನ್ನರ್-ಅಪ್, ಗ್ರೀಕ್ನ ಸಿಟ್ಸಿಪಾಸ್ ಆಸ್ಟ್ರಿಯಾದ ಸೆಬಾಸ್ಟಿಯನ್ ಆಪ್ನರ್ರನ್ನು 7-5, 6-3, 6-0 ಅಂತರದಲ್ಲಿ ಮಣಿಸಿದರು. ಕ್ವಾರ್ಟರ್‌ನಲ್ಲಿ ಆಲ್ಕರಜ್‌ಗೆ ಸಿಟ್ಸಿಪಾಸ್ ಸವಾಲು ಎದುರಾಗಲಿದೆ. ನಾರ್ವೆಯ ರುಡ್ ಚಿಲಿಯ ನಿಕೋಲಸ್ ಜರ್ರಿ ವಿರುದ್ಧ 7-6(7-3), 7-5, 7-5 ಅಂತರದಲ್ಲಿ ಜಯಗಳಿಸಿದರು.
French Open: 17ನೇ ಫ್ರೆಂಚ್ ಕ್ವಾರ್ಟರ್ಗೆ ಜೋಕೋವಿಚ್ ಲಗ್ಗೆ!
ಜಬುರ್ ದಾಖಲೆ: ಮಹಿಳಾ ಸಿಂಗಲ್ಸ್ನಲ್ಲಿ ಕ್ವಾರ್ಟರ್ಗೇರಿದ ಟ್ಯುನಿಶೀಯಾದ ಜಬುರ್, ನಾಲ್ಕೂ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಕ್ವಾರ್ಟರ್ ಪ್ರವೇಶಿಸಿದ ಮೊದಲ ಆಫ್ರಿಕಾ ಆಟಗಾರ್ತಿ ಎಂಬ ದಾಖಲೆ ಬರೆದರು. ಅವರು 4ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೆರ್ನಾರ್ಡಾ ಪೆರಾ ವಿರುದ್ಧ 6-3, 6-1ರಲ್ಲಿ ಜಯಗಳಿಸಿದರು. ಕಳೆದ ವರ್ಷ ವಿಂಬಲ್ಡನ್, ಆಸ್ಪ್ರೇಲಿಯನ್ ಓಪನ್‌ನಲ್ಲಿ ರನ್ನರ್-ಅಪ್ ಆಗಿದ್ದ ಜಬುರ್ಗೆ ಮುಂದಿನ ಸುತ್ತಿನಲ್ಲಿ ಬ್ರೆಜಿಲ್ನ ಹದ್ದಾದ್ ಮಯಾ ಸವಾಲು ಎದುರಾಗಲಿದೆ. ಹದ್ದಾದ್ 1968ರ ಬಳಿಕ ಗ್ರ್ಯಾನ್‌ಸ್ಲಾಂ ಕ್ವಾರ್ಟರ್ಗೇರಿದ ಮೊದಲ ಬ್ರೆಜಿಲ್ ಆಟಗಾರ್ತಿ ಎನ್ನುವುದು ವಿಶೇಷ.
ಫುಟ್ಬಾಲ್‌ಗೆ ಗುಡ್ಬೈ ಹೇಳಿದ ಇಬ್ರಹಿಮೋವಿಚ್!
ಮಿಲಾನ್(ಇಟಲಿ): ತಮ್ಮ ವಿಶೇಷ ಕೌಶಲ್ಯ, ಬಲಿಷ್ಠ ಹೊಡೆತ ಹಾಗೂ ವಿಶಿಷ್ಟಹೇಳಿಕೆಗಳ ಮೂಲಕವೇ ಫುಟ್ಬಾಲ್ ಜಗತ್ತಿನಲ್ಲಿ ಭಾರೀ ಹೆಸರು ಗಳಿಸಿದ್ದ ಸ್ವೀಡನ್ನ ಲ್ಯಾಟನ್ ಇಬ್ರಹಿಮೋವಿಚ್ ಫುಟ್ಬಾಲ್‌ಗೆ ವಿದಾಯ ಘೋಷಿಸಿದ್ದಾರೆ.
ಇಟಲಿ ಫುಟ್ಬಾಲ್ ಕ್ಲಬ್ ಎಸಿ ಮಿಲನ್ ಪರ ಆಡುತ್ತಿದ್ದ 41 ವರ್ಷದ ಇಬ್ರಹಿಮೋವಿಚ್ ಭಾನುವಾರ ಸೀರೀ ಎ ಲೀಗ್‌ನ ವೆರೋನಾ ವಿರುದ್ಧದ ಪಂದ್ಯದ ಬಳಿಕ ನಿವೃತ್ತಿ ನಿರ್ಧಾರ ಪ್ರಕಟಿಸಿದರು. 2001ರಲ್ಲಿ ಸ್ವೀಡನ್ ಪರ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ್ದ ಅವರು 122 ಪಂದ್ಯಗಳಲ್ಲಿ 62 ಗೋಲುಗಳನ್ನು ದಾಖಲಿಸಿದ್ದಾರೆ. ಪ್ರಸಿದ್ಧ ಕ್ಲಬ್ಗಳಾದ ಬಾರ್ಸಿಲೋನಾ, ಯುವೆಂಟಸ್, ಪಿಎಸ್ಜಿ, ಮ್ಯಾಂಚೆಸ್ಟರ್ ಯುನೈಟೆಡ್, ಇಂಟಲ್ ಮಿಲನ್ ಹಾಗೂ ಎಸಿ ಮಿಲನ್ ಸೇರಿದಂತೆ ವಿವಿಧ ತಂಡಗಳನ್ನು ಇಬ್ರಹಿಮೋವಿಚ್ ಪ್ರತಿನಿಧಿಸಿದ್ದು, 2 ದಶಕಗಳ ತಮ್ಮ ವೃತ್ತಿ ಬದುಕಿನಲ್ಲಿ 500ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾರೆ.
ಮಹಿಳಾ ಹಾಕಿ: ಭಾರತಕ್ಕೆ ಮಲೇಷ್ಯಾ ವಿರುದ್ಧ ಜಯ
ಕಾಕಮಿಗಹರ(ಜಪಾನ್): ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸತತ 2ನೇ ಗೆಲುವು ಸಾಧಿಸಿದ್ದು, ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಸೋಮವಾರ ಗುಂಪು ಹಂತದ 2ನೇ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 2-1 ಗೋಲುಗಳ ರೋಚಕ ಗೆಲುವು ಪಡೆಯಿತು. 6ನೇ ನಿಮಿಷದಲ್ಲೇ ಗೋಲು ಬಾರಿಸಿ ಪಂದ್ಯದ ಮೇಲೆ ಮಲೇಷ್ಯಾ ಹಿಡಿತ ಸಾಧಿಸಲು ಯತ್ನಿಸಿದರೂ, 10ನೇ ನಿಮಿಷದಲ್ಲಿ ಮುಮ್ತಾಜ್ ಖಾನ್ ಹೊಡೆದ ಗೋಲಿನಿಂದಾಗಿ ಭಾರತ ಸಮಬಲ ಸಾಧಿಸಿತು. ಬಳಿಕ 26ನೇ ನಿಮಿಷದಲ್ಲಿ ದೀಪಿಕಾ ಬಾರಿಸಿದ ಗೋಲು ಭಾರತದ ಗೆಲುವಿನ ಗೋಲಾಗಿ ಪರಿವರ್ತನೆಗೊಂಡಿತು. ಭಾರತ ತನ್ನ 3ನೇ ಪಂದ್ಯದಲ್ಲಿ ಮಂಗಳವಾರ ಕೊರಿಯಾ ವಿರುದ್ಧ ಆಡಲಿದೆ.