French Open 2023: ಫೈನಲ್‌ಗೆ ಸ್ವಿಯಾಟೆಕ್, ಮುಕೋವಾ ಲಗ್ಗೆ..!
ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌ಗೆ ಮುಕೋವಾ!
ಫ್ರೆಂಚ್ ಓಪನ್: ಸೆಮಿಫೈನಲ್ನಲ್ಲಿ ವಿಶ್ವ ನಂ.2 ಸಬಲೆಂಕಾಗೆ ಆಘಾತಕಾರಿ ಸೋಲು
ಶನಿವಾರ ಇಗಾ ಸ್ವಿಯಾಟೆಕ್-ಕ್ಯಾರೋಲಿನಾ ಮುಕೋವಾ ಫೈನಲ್ ಫೈಟ್
ಪ್ಯಾರಿಸ್(ಜೂ.09): ಹಾಲಿ ಚಾಂಪಿಯನ್ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಹಾಗೂ ಶ್ರೇಯಾಂಕ ರಹಿತ ಜೆಕ್ ಗಣರಾಜ್ಯದ ಕ್ಯಾರೋಲಿನಾ ಮುಕೋವಾ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮೊದಲ ಸೆಮೀಸ್‌ನಲ್ಲಿ ವಿಶ್ವ ನಂ.2, ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಬೆಲಾರಸ್‌ನ ಅರೈನಾ ಸಬಲೆಂಕಾ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ ಶ್ರೇಯಾಂಕ ರಹಿತ ಕ್ಯಾರೋಲಿನಾ ಮುಕೋವಾ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇದರೊಂದಿಗೆ ಚೆಕ್ ಗಣರಾಜ್ಯದ 26 ವರ್ಷದ ಮುಕೋವಾ ಗ್ರ್ಯಾನ್‌ಸ್ಲಾಂನಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದ್ದಾರೆ. ಜೊತೆಗೆ ಈ ವರ್ಷದ ಗ್ರ್ಯಾನ್‌ಸ್ಲಾಂನಲ್ಲಿ ಸಬಲೆಂಕಾಗೆ ಸೋಲಿನ ರುಚಿ ಕಾಣಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗುರುವಾರ 3 ಗಂಟೆ 13 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಮುಕೋವಾ 7-6(7-5), 6-7(5-7), 7-5 ಸೆಟ್‌ಗಳಲ್ಲಿ ರೋಚಕ ಜಯಭೇರಿ ಬಾರಿಸಿದರು. ಕೊನೆ ಸೆಟ್‌ನಲ್ಲಿ ಒಂದು ಹಂತದಲ್ಲಿ ಸಬಲೆಂಕಾ 5-2ರಿಂದ ಮುಂದಿದ್ದರೂ ಸೋಲಲು ಸಿದ್ಧವಿರದ ವಿಶ್ವ ನಂ.43 ಮುಕೋವಾ ಅಚ್ಚರಿಯ ರೀತಿಯಲ್ಲಿ ಪೈಪೋಟಿ ನೀಡಿ ಪಂದ್ಯ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದರೊಂದಿಗೆ 2ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಸಬಲೆಂಕಾ ಕನಸು ಭಗ್ನಗೊಂಡಿತು.
French Open 2023: ಆಲ್ಕರಜ್, ಇಗಾ ಸ್ವಿಯಾಟೆಕ್ ಸೆಮೀಸ್‌ಗೆ ಲಗ್ಗೆ
ಇನ್ನು ಎರಡನೇ ಸೆಮೀಸ್‌ನಲ್ಲಿ ಬ್ರೆಜಿಲ್‌ನ ಬೀಟ್ರೆಜ್ ಹಡ್ದಾದ್ ವಿರುದ್ದ ಸ್ವಿಯಾಟೆಕ್ 6-2, 7-6(9/7), ಸೆಟ್‌ಗಳಲ್ಲಿ ಜಯಿಸಿ 4 ವರ್ಷಗಳಲ್ಲಿ 3ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ಗೇರಿದರು. ಮೊದಲ ಸೆಟ್ ಸುಲಭವಾಗಿ ತಮ್ಮದಾಗಿಸಿಕೊಂಡ ಇಗಾ, 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಿಸಿದರು. ಆದರೆ ಟೈಬ್ರೇಕರ್‌ನಲ್ಲಿ ಸ್ವಿಯಾಟೆಕ್ ಜಯ ಸಾಧಿಸಿ ಫೈನಲ್‌ಗೇರಿದರು. ಶನಿವಾರ ಇಗಾ ಸ್ವಿಯಾಟೆಕ್ ತಮ್ಮ ಮೂರನೇ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಾಗಿ ಮುಕೋವಾ ವಿರುದ್ದ ಸೆಣಸಲಿದ್ದಾರೆ.
ಜೋಕೋ-ಆಲ್ಕರಜ್ ಸೆಮೀಸ್ ಫೈಟ್ ಇಂದು
ಈ ಬಾರಿ ಫ್ರೆಂಚ್ ಓಪನ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ 22 ಗ್ರ್ಯಾನ್ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್ ಹಾಗೂ ವಿಶ್ವ ನಂ.1 ಟೆನಿಸಿಗ ಕಾರ್ಲೋಸ್ ಆಲ್ಕರಜ್ ಶುಕ್ರವಾರ ಹೈವೋಲ್ಟೇಜ್ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿದ್ದಾರೆ. ಜೋಕೋ ಹಾಗೂ 20ರ ಆಲ್ಕರಜ್ ಈ ಮೊದಲು 2022ರಲ್ಲಿ ಮ್ಯಾಡ್ರಿಡ್ ಓಪನ್ನಲ್ಲಿ ಮುಖಾಮುಖಿಯಾಗಿದ್ದು, ಜೋಕೋರನ್ನು ಆಲ್ಕರಜ್ ಸೋಲಿಸಿ ಗಮನ ಸೆಳೆದಿದ್ದರು. ಜೋಕೋ ಗ್ರ್ಯಾನ್‌ಸ್ಲಾಂನಲ್ಲಿ 45ನೇ ಬಾರಿ ಸೆಮೀಸ್ ಆಡಲಿದ್ದು, ಹಾಲಿ ಯುಎಸ್ ಓಪನ್ ಚಾಂಪಿಯನ್ ಆಲ್ಕರಜ್ಗೆ ಇದು 2ನೇ ಸೆಮಿಫೈನಲ್.
ಇನ್ನು, ಶುಕ್ರವಾರದ ಮತ್ತೊಂದು ಸೆಮೀಸ್‌ನಲ್ಲಿ ಕಳೆದ ಬಾರಿ ರನ್ನರ್-ಅಪ್ ಕ್ಯಾಸ್ಪೆರ್ ರುಡ್ ಹಾಗೂ 22ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಪರಸ್ಪರ ಸೆಣಸಲಿದ್ದಾರೆ. 4ನೇ ಶ್ರೇಯಾಂಕಿತ ರುಡ್, ಡೆನ್ಮಾರ್ಕ್ನ ಹೋಲ್ಗರ್ ರುನೆ ವಿರುದ್ಧ 6-1, 6-2, 3-6, 6-3 ಸೆಟ್ಗಳಿಂದ ಗೆದ್ದು ಸತತ 2ನೇ ಬಾರಿ ಸೆಮೀಸ್ಗೇರಿದ್ದು, ಜ್ವೆರೆವ್ ಅರ್ಜೆಂಟೀನಾದ ಥಾಮಸ್ ಮಾರ್ಟಿನ್ ವಿರುದ್ಧ 6-4, 3-6, 6-3, 6-4 ಸೆಟ್‌ಗಳಲ್ಲಿ ಜಯಿಸಿ ಸತತ 3ನೇ ಬಾರಿ ಫ್ರೆಂಚ್ ಓಪನ್ ಸೆಮೀಸ್ ತಲುಪಿದ್ದಾರೆ.