ಪ್ಯಾರಿಸ್‌(ಜೂ.06): ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಆಯೋಜಕರ ತಲೆಬಿಸಿ ಹೆಚ್ಚಾಗಿದೆ. ಬುಧವಾರ ಇಡೀ ದಿನ ಮಳೆ ಸುರಿದ ಕಾರಣ, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಸಿಮೋನಾ ಹಾಲೆಪ್‌ ಹಾಗೂ ಪುರುಷರ ಸಿಂಗಲ್ಸ್‌ನ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ರ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಸೇರಿ ನಿಗದಿಯಾಗಿದ್ದ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸಬೇಕಾಯಿತು.

ಬುಧವಾರ ಜೋಕೋವಿಚ್‌, 5ನೇ ಶ್ರೇಯಾಂಕಿತ ಜರ್ಮನಿಯ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಸೆಣಸಬೇಕಿತ್ತು. ಹಾಲೆಪ್‌ಗೆ ಅಮೆರಿಕದ ಅಮಾಂಡ ಅನಿಸಿಮೊವಾ ವಿರುದ್ಧ ಪಂದ್ಯವಿತ್ತು. ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಗುರುವಾರಕ್ಕೆ ಮುಂದೂಡಲಾಗಿದ್ದು, ಪಂದ್ಯಗಳು 2 ಗಂಟೆ ಮುಂಚಿತವಾಗಿಯೇ ಆರಂಭಗೊಳ್ಳಲಿದೆ. 

ಸೆಮಿಫೈನಲ್‌, ಫೈನಲ್‌ ಪ್ರವೇಶಿಸುವ ನೆಚ್ಚಿನ ಟೆನಿಸಿಗರು ಎನಿಸಿರುವ ಜೋಕೋವಿಚ್‌, ಹಾಲೆಪ್‌ ಸತತ 3 ದಿನ ಪಂದ್ಯಗಳನ್ನಾಡುವ ಸಾಧ್ಯತೆ ಇದೆ. ಒಂದೊಮ್ಮೆ ಅನಿವಾರ್ಯವೆನಿಸಿದರೆ ಮಹಿಳಾ ಸಿಂಗಲ್ಸ್‌ ಫೈನಲ್‌ ಪಂದ್ಯವನ್ನು ಶನಿವಾರದ ಬದಲು ಭಾನುವಾರ ನಡೆಸುವುದಾಗಿ ಟೂರ್ನಿ ನಿರ್ದೇಶತಕ ಗಯ್‌ ಫರ್ಗೆಟ್‌ ಹೇಳಿದ್ದಾರೆ.