ಫ್ರೆಂಚ್ ಓಪನ್: ನಡಾಲ್ ಶುಭಾರಂಭ, ವೋಜ್ನಿಯಾಕಿ ಔಟ್!
ಇಟಲಿ ಓಪನ್‌ನಲ್ಲಿ ಚಾಂಪಿಯನ್ ಆಗುವ ಮೂಲಕ, ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಂಗೆ ಭರ್ಜರಿ ತಯಾರಿ ನಡೆಸಿದ್ದ ನಡಾಲ್, ಸೋಮವಾರ ನಿರಾಯಾಸವಾಗಿ ಗೆಲುವು ಕಂಡರು. ಈ ಗೆಲುವಿನೊಂದಿಗೆ ಫ್ರೆಂಚ್ ಓಪನ್‌ನಲ್ಲಿ ಅವರ ಗೆಲುವು-ಸೋಲಿನ ದಾಖಲೆ 87-2ಕ್ಕೇರಿದೆ.
ಪ್ಯಾರಿಸ್(ಮೇ.28): ದಾಖಲೆಯ 12ನೇ ಫ್ರೆಂಚ್ ಓಪನ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಸ್ಪೇನ್‌ನ ರಾಫೆಲ್ ನಡಾಲ್, ರೋಲೆಂಡ್ ಗಾರೊಸ್‌ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಜರ್ಮನಿಯ ಯಾನ್ನಿಕ್ ಹಾನ್ ಫಮನ್ ವಿರುದ್ಧ 6-2, 6-1, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ ಶುಭಾರಂಭ ಮಾಡಿದರು. 2ನೇ ಸುತ್ತಿನಲ್ಲಿ 17 ಗ್ರ್ಯಾಂಡ್‌ಸ್ಲಾಂಗಳ ಒಡೆಯ, ವಿಶ್ವ ನಂ.114, ಜರ್ಮನಿಯ ಯಾನ್ನಿಕ್ ಮಡೆನ್ ವಿರುದ್ಧ ಸೆಣಸಲಿದ್ದಾರೆ.
ಕಳೆದ ವಾರ ಇಟಲಿ ಓಪನ್‌ನಲ್ಲಿ ಚಾಂಪಿಯನ್ ಆಗುವ ಮೂಲಕ, ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಂಗೆ ಭರ್ಜರಿ ತಯಾರಿ ನಡೆಸಿದ್ದ ನಡಾಲ್, ಸೋಮವಾರ ನಿರಾಯಾಸವಾಗಿ ಗೆಲುವು ಕಂಡರು. ಈ ಗೆಲುವಿನೊಂದಿಗೆ ಫ್ರೆಂಚ್ ಓಪನ್‌ನಲ್ಲಿ ಅವರ ಗೆಲುವು-ಸೋಲಿನ ದಾಖಲೆ 87-2ಕ್ಕೇರಿದೆ.
ಇದೇ ವೇಳೆ 12ನೇ ಶ್ರೇಯಾಂಕಿತ ರಷ್ಯಾದ ಡಾನಿಲ್ ಮೆಡ್ವೆಡೆವ್, ಫ್ರಾನ್ಸ್‌ನ ಪಿಯರ್ ಹ್ಯೂಸ್ ಹರ್ಬಟ್ ವಿರುದ್ಧ 6-4, 6-4, 3-6, 2-6, 5-7 ಸೆಟ್‌ಗಳಲ್ಲಿ ಸೋಲುಂಡು ಆಘಾತ ಅನುಭವಿಸಿದರು.
ವೋಜ್ನಿಯಾಕಿಗೆ ಆಘಾತ!
ಮಾಜಿ ನಂ.1 ಕ್ಯಾರೋಲಿನ್ ವೋಜ್ನಿಯಾಕಿ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.68, ರಷ್ಯಾದ ವೆರೊನಿಕಾ ಕುಡೆರ್ಮೆಟೊವಾ ವಿರುದ್ಧ 6-0, 3-6, 3-6 ಸೆಟ್‌ಗಳಲ್ಲಿ ಸೋಲುಂಡು ಆಘಾತ ಅನುಭವಿಸಿದರು. 13ನೇ ಶ್ರೇಯಾಂಕಿತೆ ಡೆನ್ಮಾರ್ಕ್ನ ವೋಜ್ನಿಯಾಕಿ, ಗಾಯದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್‌ಗೆ ಸರಿಯಾದ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಪಂದ್ಯದ ಮೊದಲ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ವೋಜ್ನಿಯಾಕಿ, ನಂತರದ 2 ಸೆಟ್‌ಗಳಲ್ಲಿ ಪದೇ ಪದೇ ತಪ್ಪುಗಳನ್ನೆಸಗಿದ ಕಾರಣ ಸೋಲು ನಿಶ್ಚಿತವಾಯಿತು.
8ನೇ ಶ್ರೇಯಾಂಕಿತೆ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಬ್ರಿಟನ್‌ನ ಜೊಹಾನ ಕೊಂಟಾ, 4ನೇ ಶ್ರೇಯಾಂಕಿತೆ ನೆದರ್‌ಲೆಂಡ್ಸ್‌ನ ಕೀಕಿ ಬೆರ್ಟೆನ್ಸ್ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತು ಪ್ರವೇಶಿಸಿದರು.