ಪ್ಯಾರಿಸ್‌[ಮೇ.31]: ವಿಶ್ವ ನಂ.1 ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ಜಪಾನ್‌ನ ನವೊಮಿ ಒಸಾಕ ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನಲ್ಲಿ 3ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಜೋಕೋವಿಚ್‌, ಸ್ವಿಜರ್‌ಲೆಂಡ್‌ನ ಹೆನ್ರಿ ಲಕ್ಸೋನೆನ್‌ ವಿರುದ್ಧ 6-1, 6-4, 6-3 ಸೆಟ್‌ಗಳಲ್ಲಿ ಜಯಗಳಿಸಿದರು. 3ನೇ ಸುತ್ತಿನಲ್ಲಿ ಜೋಕೋವಿಚ್‌ ಇಟಲಿಯ ಕರುಸೊ ವಿರುದ್ಧ ಸೆಣಸಲಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸೋಲಿನ ದವಡೆಯಿಂದ ಪಾರಾಗಿದ್ದ ಒಸಾಕ, 2ನೇ ಸುತ್ತಿನ ಪಂದ್ಯದಲ್ಲೂ ಪ್ರಯಾಸದ ಗೆಲುವು ಸಾಧಿಸಿದರು. ಮಾಜಿ ನಂ.1 ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ 4-6, 7-5, 6-3 ಸೆಟ್‌ಗಳಲ್ಲಿ ಗೆದ್ದು ಒಸಾಕ ನಿಟ್ಟುಸಿರು ಬಿಟ್ಟರು.

ಸೆರೆನಾಗೆ ಜಯ: 23 ಗ್ರ್ಯಾಂಡ್‌ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್‌ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಜಪಾನ್‌ನ ಕುರುಮಿ ನಾರಾ ವಿರುದ್ಧ 6-3, 6-2 ನೇರ ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು. ಇದೇ ವೇಳೆ ಮಿಶ್ರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಭಾರತದ ದಿವಿಜ್‌ ಶರಣ್‌-ಜಪಾನ್‌ನ ಶುಕೊ ಅವೊಯಾಮ ಜೋಡಿ ಸೋಲುಂಡು ಹೊರಬಿತ್ತು.