10ನೇ ಬಾರಿ ಕ್ವಾರ್ಟರ್‌ಗೇರಿ ಜೋಕೋವಿಚ್ ದಾಖಲೆ!
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ 10 ವರ್ಷ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ನೋವಾಕ್ ಜೋಕೋವಿಚ್ ನಿರ್ಮಿಸಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ...
ಪ್ಯಾರಿಸ್(ಜೂ.04): ನೋವಾಕ್ ಜೋಕೋವಿಚ್ ಸೋಮವಾರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ 10 ವರ್ಷ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದರು. ವಿಶ್ವ ನಂ.1, ಸರ್ಬಿಯಾದ ಜೋಕೋವಿಚ್ 4ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಜಾನ್ ಲೆನ್ನಾರ್ಡ್ ಸ್ಟ್ರಫ್ ವಿರುದ್ಧ 6-3,6-2,6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.
ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಒಂದೇ ಸಮಯದಲ್ಲಿ ಎಲ್ಲಾ 4 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವತ್ತ ಜೋಕೋವಿಚ್ ದಾಪುಗಾಲಿರಿಸಿದ್ದಾರೆ. ಒಟ್ಟಾರೆ ಫ್ರೆಂಚ್ ಓಪನ್‌ನಲ್ಲಿ ಜೋಕೋವಿಚ್‌ಗಿದು 13ನೇ ಕ್ವಾರ್ಟರ್ ಫೈನಲ್ ಪಂದ್ಯವಾಗಲಿದೆ.
ನಡಾಲ್‌ಗೆ ನಿಶಿಕೋರಿ ಸವಾಲು: 7ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೇ ನಿಶಿಕೋರಿ, 4ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಬೆನೋಯಿ ಪೇರ್ ವಿರುದ್ಧ 6-2, 6-7, 6-2,6-7,7-5 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅಂತಿಮ ಸೆಟ್‌ನಲ್ಲಿ 3-5 ಗೇಮ್‌ಗಳಿಂದ ಹಿಂದಿದ್ದ ನಿಶಿಕೋರಿ ಸತತ 4 ಗೇಮ್‌ಗಳನ್ನು ಗೆದ್ದು ಪಂದ್ಯ ವಶಪಡಿಸಿಕೊಂಡರು. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ಆಟಗಾರ ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ವಿರುದ್ಧ ಸೆಣಸಲಿದ್ದಾರೆ.
ಕ್ವಾರ್ಟರ್‌ಗೆ ಕೀಸ್, ಬಾರ್ಟಿ
ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ನವೊಮಿ ಒಸಾಕ ಹಾಗೂ ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿದ್ದ ಆಟಗಾರ್ತಿಯರ ಓಟ ಮುಕ್ತಾಯಗೊಂಡಿತು. ಒಸಾಕ ವಿರುದ್ಧ ಗೆದ್ದಿದ್ದ ಚೆಕ್ ಗಣರಾಜ್ಯದ ಕ್ಯಾತರೀನಾ ಸಿನಿಯಾಕೊವಾ, 14ನೇ ಶ್ರೇಯಾಂಕಿತೆ ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ 2-6, 4-6 ಸೆಟ್‌ಗಳಲ್ಲಿ ಸೋಲುಂಡರು. ಸತತ 2ನೇ ಬಾರಿಗೆ ಕೀಸ್ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ಗೇರಿದರು.
ಸೆರೆನಾ ವಿರುದ್ಧ ಗೆದ್ದಿದ್ದ ಅಮೆರಿಕದ ಸೋಫಿ ಕೆನಿನ್, 8ನೇ ಶ್ರೇಯಾಂಕಿತೆ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ವಿರುದ್ಧ 3-6, 6-3, 0-6 ಸೆಟ್‌ಗಳಲ್ಲಿ ಸೋಲುಂಡರು. ಕ್ವಾರ್ಟರ್ ಫೈನಲ್‌ನಲ್ಲಿ ಕೀಸ್ ಹಾಗೂ ಬಾರ್ಟಿ ಎದುರಾಗಲಿದ್ದಾರೆ.