ಪ್ಯಾರಿಸ್‌[ಮೇ.30]: ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಹಾಲಿ ಚಾಂಪಿಯನ್‌ ರಾಫೆಲ್‌ ನಡಾಲ್‌ ಹಾಗೂ 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ರೋಜರ್‌ ಫೆಡರರ್‌ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ 2ನೇ ಸುತ್ತಿನ ಪಂದ್ಯದಲ್ಲಿ ದಿಗ್ಗಜ ಆಟಗಾರರಿಬ್ಬರು ಸುಲಭ ಗೆಲುವು ಸಾಧಿಸಿದರು. ಜರ್ಮನಿಯ ಯಾನ್ನಿಕ್‌ ಮಡೆನ್‌ ವಿರುದ್ಧ ನಡಾಲ್‌ 6-1, 6-2, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರೆ, ಜರ್ಮನಿಯ ಆಸ್ಕರ್‌ ಒಟ್ಟೆ ವಿರುದ್ಧ ಫೆಡರರ್‌ 6-4, 6-3, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 3ನೇ ಸುತ್ತಿನಲ್ಲಿ ನಡಾಲ್‌ಗೆ 27ನೇ ಶ್ರೇಯಾಂಕಿತ ಆಟಗಾರ ಬೆಲ್ಜಿಯಂನ ಡೇವಿಡ್‌ ಗಾಫಿನ್‌ ಎದುರಾದರೆ, ಫೆಡರರ್‌ ನಾರ್ವೆಯ ಕಾಸ್ಪರ್‌ ರುಡ್‌ ವಿರುದ್ಧ ಸೆಣಸಲಿದ್ದಾರೆ. ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ, 6ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟೆಫಾನೋ ಟಿಟ್ಸಿಪಾಸ್‌ ಸಹ 3ನೇ ಸುತ್ತಿಗೇರಿದರು.

ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ 2016ರ ಚಾಂಪಿಯನ್‌ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ, ಸ್ವೀಡನ್‌ನ ಲಾರ್ಸನ್‌ ವಿರುದ್ಧ 6-4, 6-1ರಲ್ಲಿ ಗೆದ್ದು 3ನೇ ಸುತ್ತಿಗೆ ಪ್ರವೇಶಿಸಿದರೆ, 7ನೇ ಶ್ರೇಯಾಂಕಿತ ಆಟಗಾರ್ತಿ ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌ ಸ್ಪೇನ್‌ನ ಸೊರಿಬ್ಬೆಸ್‌ ವಿರುದ್ಧ 6-1, 7-6 ಸೆಟ್‌ಗಳಲ್ಲಿ ಜಯಗಳಿಸಿ ಮುನ್ನಡೆದರು.

ದಿವಿಜ್‌ ಜೋಡಿಗೆ ಜಯ: ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಭಾರತದ ದಿವಿಜ್‌ ಶರಣ್‌ ಹಾಗೂ ಬ್ರೆಜಿಲ್‌ನ ಮಾರ್ಸೆಲೋ ಡೆಮೊಲೈನರ್‌ ಜೋಡಿ ಸ್ವೀಡನ್‌ನ ರಾಬರ್ಟ್‌ ಹಾಗೂ ಹಂಗೇರಿಯ ಫುಕ್ಸೊವಿಕ್ಸ್‌ ವಿರುದ್ಧ 6-4, 4-6, 6-2 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೆ ಪ್ರವೇಶ ಪಡೆಯಿತು.