ಮಲೇಷಿಯಾ ವಿರುದ್ಧದ ಪಂದ್ಯದಲ್ಲಿ 4-2 ಗೋಲುಗಳ ಗೆಲುವು ಕಂಡ ಭಾರತ, ಆ ಮೂಲಕ ಹಿಂದಿನ ದಿನ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ 2-3 ಗೋಲುಗಳ ಸೋಲಿನಿಂದ ಪುಟಿದೆದ್ದು ನಿಂತಿತು.
ಮೆಲ್ಬೋರ್ನ್(ನ.24): ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಪ್ರವಾಸಿ ಭಾರತ ತಂಡ, ಕನ್ನಡಿಗ ನಿಕಿನ್ ತಿಮ್ಮಯ್ಯ ದಾಖಲಿಸಿದ ಎರಡು ಅಪೂರ್ವ ಗೋಲುಗಳಿಂದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ ಮೊದಲ ಗೆಲುವಿನ ಸವಿ ಕಂಡಿದೆ.
ಇಂದು ನಡೆದ ಮಲೇಷಿಯಾ ವಿರುದ್ಧದ ಪಂದ್ಯದಲ್ಲಿ 4-2 ಗೋಲುಗಳ ಗೆಲುವು ಕಂಡ ಭಾರತ, ಆ ಮೂಲಕ ಹಿಂದಿನ ದಿನ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ 2-3 ಗೋಲುಗಳ ಸೋಲಿನಿಂದ ಪುಟಿದೆದ್ದು ನಿಂತಿತು.
ಭಾರತ ತಂಡದ ಪರ ನಿಕಿನ್ 21 ಮತ್ತು 55ನೇ ನಿಮಿಷಗಳಲ್ಲಿ ಗೋಲು ಹೊಡೆದರೆ, ರೂಪೀಂದರ್ ಪಾಲ್ ಸಿಂಗ್ (40ನೇ ನಿ.) ಮತ್ತು ಆಕಾಶ್‌ದೀಪ್ ಸಿಂಗ್ 56ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರು. ಅಂದಹಾಗೆ ಮಲೇಷಿಯಾ ವಿರುದ್ಧದ ಗೆಲುವಿನಲ್ಲಿ ಗೋಲ್'ಕೀಪರ್ ಆಕಾಶ್ ಚಿಕ್ಟೆ ಕೂಡ ಪ್ರಧಾನ ಪಾತ್ರ ವಹಿಸಿದರು. ಮೂರು ಕ್ವಾರ್ಟರ್'ಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಅವರು, ಮಲೇಷಿಯಾದ ಹಲವಾರು ಗೋಲುಗಳನ್ನು ಯಶಸ್ವಿಯಾಗಿ ತಡೆದರು.
ಇತ್ತ, ಮಲೇಷಿಯಾ ಪರ ಐಜಲ್ ಸಾರಿ (39ನೇ ನಿ.) ಮತ್ತು ಶಹ್ರಿಲ್ ಸಾಬಾಹ್ 47ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ಹೊಡೆದರು.
ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಮಲೇಷಿಯಾ ವಿರುದ್ಧ ಭಾರತ ಆಕ್ರಮಣಕಾರಿ ಪ್ರದರ್ಶನ ನೀಡಿತು. ಅದಕ್ಕೆ ತಕ್ಕಂತೆ ನಿಕಿನ್ ತಿಮ್ಮಯ್ಯ ಮೊದಲಿಗೆ ಗೋಲು ಬಾರಿಸಿ ಮಲೇಷಿಯಾ ಮೇಲೆ ಒತ್ತಡ ಹೇರಿದರು. ಆದರೆ, ಮೂರನೇ ಕ್ವಾರ್ಟರ್‌ನಲ್ಲಿ ಐಜಲ್ ಗೋಲು ಬಾರಿಸಿ ತಂಡ ಸಮಬಲ ಸಾಧಿಸಲು ನೆರವಾದರು. ವಿಶ್ವದ ಆರನೇ ಶ್ರೇಯಾಂಕಿತ ಭಾರತದ ವಿರುದ್ಧ ಹೆಜ್ಜೆ ಹೆಜ್ಜೆಗೂ ಹೋರಾಟವನ್ನು ತೀವ್ರಗೊಳಿಸಿದ ಮಲೇಷಿಯಾ, ಭಾರತದ ಶಿಸ್ತುಬದ್ಧ ಆಟಕ್ಕೆ ಕೊನೆಗೂ ಮಣಿಯಲೇಬೇಕಾಯಿತು. ಇದೀಗ ಪಂದ್ಯಾವಳಿಯಲ್ಲಿ ಭಾರತ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಶನಿವಾರ (ನ.26) ಆಡಲಿದೆ.
