ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಹೇಳಿದ RCB ಮಾಜಿ ಕ್ರಿಕೆಟಿಗ..!
IPL ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪದಾರ್ಪಣೆ ಮಾಡಿ, RCB ಪರವೇ ಕೊನೆಯ ಪಂದ್ಯವನ್ನಾಡಿದ್ದ ನ್ಯೂಜಿಲೆಂಡ್ ಕ್ರಿಕೆಟಿಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ವ್ಯಾಂಕೋವರ್(ಆ.06): ಸದ್ಯ ಕೆನಡಾದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಆಡುತ್ತಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ, ಟೂರ್ನಿ ಮುಕ್ತಾಯಗೊಂಡ ಬಳಿಕ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಚೊಚ್ಚಲ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಮೆಕ್ಕಲಂ, RCB ಪರವೇ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನಾಡಿದ್ದರು.
37 ವರ್ಷದ ಮೆಕ್ಕಲಂ ಡೈವ್ ಕ್ಯಾಚ್ ಯತ್ನಕ್ಕೆ ತಲೆಬಾಗಿದ ಫ್ಯಾನ್ಸ್!
ನ್ಯೂಜಿಲೆಂಡ್ ಕಂಡ ಶ್ರೇಷ್ಠ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದ ಮೆಕ್ಕಲಂ, ಚೊಚ್ಚಲ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೇ 158 ರನ್ ಸಿಡಿಸಿ ಗಮನ ಸೆಳೆದಿದ್ದರು. 2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಮೆಕ್ಕಲಂ, ಆ ಬಳಿಕವೂ ಟಿ20 ಲೀಗ್’ನಲ್ಲಿ ಮುಂದುವರೆದಿದ್ದರು.
ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಕಿವೀಸ್ ತಂಡದ ದಿಕ್ಕನ್ನೇ ಬದಲಾಯಿಸಿದ್ದ ಬ್ರೆಂಡನ್ ಮೆಕ್ಕಲಂ, 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ನಾಯಕನಾಗಿ ತಂಡವನ್ನು ಫೈನಲ್’ಗೇರಿಸಿದ್ದರು. ಟೆಸ್ಟ್ ಕ್ರಿಕೆಟ್’ನಲ್ಲಿ ನ್ಯೂಜಿಲೆಂಡ್ ಪರ ಎರಡನೇ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿರುವ ಮೆಕ್ಕಲಂ, ಕಿವೀಸ್ ಪರ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಕೂಡಾ ಹೌದು.
ಇಲ್ಲಿಯವರೆಗೂ ಬ್ರೆಂಡನ್ ಮೆಕ್ಕಲಂ ಒಟ್ಟಾರೆ 370 ಟಿ20 ಪಂದ್ಯಗಳನ್ನಾಡಿ 9922 ರನ್ ಬಾರಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್’ರೈಡರ್ಸ್, ಕೊಚ್ಚಿ ಟಸ್ಕರ್ಸ್ ಕೇರಳ, ಚೆನ್ನೈ ಸೂಪರ್’ಕಿಂಗ್ಸ್, ಗುಜರಾತ್ ಲಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಬ್ರೆಂಡನ್ ಮೆಕ್ಕಲಂ ಅವರನ್ನು RCB 2019ರಲ್ಲಿ ತಂಡದಿಂದ ಕೈಬಿಟ್ಟಿತ್ತು. ಇನ್ನು ಕಿವೀಸ್ ಪರ 101 ಟೆಸ್ಟ್, 260 ಏಕದಿನ ಹಾಗೂ 71 ಟಿ20 ಪಂದ್ಯಗಳನ್ನಾಡಿದ್ದಾರೆ.