ಮೂವರು ಪತ್ನಿಯರಿದ್ದ ಫುಟ್ಬಾಲಿಗನ ಮೃತದೇಹಕ್ಕೆ ಫೈಟ್!
‘ಏಷ್ಯಾದ ಪೀಲೆ’ ಎಂದೇ ಖ್ಯಾತರಾದ ಕಣ್ಣನ್ ವಿಧಿವಶ| ಮಾಜಿ ಫುಟ್ಬಾಲಿಗನ ಮೃತದೇಹಕ್ಕೆ ಪತ್ನಿಯರ ಫೈಟ್!
ಕೋಲ್ಕತಾ[ಮೇ.02]: ಭಾರತದ ಮಾಜಿ ಫುಟ್ಬಾಲಿಗ, ‘ಏಷ್ಯಾದ ಪೀಲೆ’ ಎಂದೇ ಕರೆಸಿಕೊಳ್ಳುತ್ತಿದ್ದ ಪಿ.ಕಣ್ಣನ್ ಅವರ ಮೃತದೇಹಕ್ಕೆ ಅವರ ಪತ್ನಿಯರು ಕಿತ್ತಾಡಿದ ಪ್ರಸಂಗ ನಡೆದಿದೆ. ಈ ಕಾರಣದಿಂದಾಗಿ ಮೃತದೇಹವನ್ನು 3 ದಿನಗಳ ಕಾಲ ಶವಗಾರದಲ್ಲೇ ಇರಿಸಲಾಗಿತ್ತು. ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಕಣ್ಣನ್, ಭಾನುವಾರ ಇಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಈ ವೇಳೆ ಅವರ 2ನೇ ಪತ್ನಿ ಆಂಟೋನೆಟ್ ಹಾಗೂ ಇಬ್ಬರು ಪುತ್ರಿಯರು ಜತೆಗಿದ್ದರು. ಆದರೆ ಬೆಂಗಳೂರಲ್ಲಿ ವಾಸವಿರುವ ಅವರ ಮೊದಲ ಪತ್ನಿ ವಿಜಯ ಲಕ್ಷ್ಮಿ ವಿವಾಹ ಪ್ರಮಾಣ ಪತ್ರದೊಂದಿಗೆ ಕೋಲ್ಕತಾಕ್ಕೆ ತೆರಳಿ ಮೃತದೇಹವನ್ನು ತಮಗೆ ಹಸ್ತಾಂತರಿಸುವಂತೆ ಪಟ್ಟು ಹಿಡಿದರು.
ಈ ವಿವಾದದ ವೇಳೆ ಕಣ್ಣನ್‌ಗೆ 3ನೇ ಪತ್ನಿ ಸಹ ಇರುವುದು ಬಹಿರಂಗವಾಯಿತು. ಆದರೆ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಹೊರಬೀಳಲಿಲ್ಲ. ಮೊದಲ ಹಾಗೂ 2ನೇ ಪತ್ನಿ ನಡುವಿನ ಕಿತ್ತಾಟದ ಕಾರಣ, ಮೃತದೇಹವನ್ನು 3 ದಿನಗಳ ಕಾಲ ಇಲ್ಲಿನ ದುಮ್ ದುಮ್ ನಗರದಲ್ಲಿರುವ ಗೋರಾ ಬಜಾರ್ ಶವಗಾರದಲ್ಲಿ ಇರಿಸಲಾಗಿತ್ತು.
ಬೆಂಗಳೂರಿಗೆ ಮೃತದೇಹ: 3 ದಿನಗಳ ಕಿತ್ತಾಟದ ಬಳಿಕ ಮೊದಲ ಪತ್ನಿ ವಿಜಯ ಲಕ್ಷ್ಮಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು ಎಂದು ಸ್ಥಳೀಯ ಕಾರ್ಪೋರೇಟರ್ ಸಂಜಯ್ ದಾಸ್ ತಿಳಿಸಿದ್ದಾರೆ. ಕಣ್ಣನ್‌ರ ಕೋಲ್ಕತಾ ಮೂಲದ ಪತ್ನಿ ಅಂಟೋನೆಟ್, ಮೃತದೇಹವನ್ನು ಬೆಂಗಳೂರಿಗೆ ಕೊಂಡೊಯ್ಯಲು ನಿರಾಕ್ಷೇಪಣ ಪತ್ರ ನೀಡಿರುವುದಾಗಿ ಹೇಳಿದ್ದಾರೆ. ‘ನಾನು 1975ರಲ್ಲಿ ಕಣ್ಣನ್‌ರನ್ನು ಮದುವೆಯಾಗಿದ್ದೆ. ಆಗಿನಿಂದಲೂ ಜತೆಯಲ್ಲಿದ್ದೇನೆ. ಅನಾರೋಗ್ಯದಿಂದ ಅವರು ಬಳಲುತ್ತಿದ್ದ ವೇಳೆ ಅವರ ಜತೆ ಇದ್ದವಳು ನಾನು. ಇಷ್ಟುವರ್ಷ ಪತ್ನಿಯಾಗಿ ನನ್ನ ಕರ್ತವ್ಯ ಮಾಡಿದ್ದಾನೆ. ಮೃತದೇಹಕ್ಕಾಗಿ ಕಿತ್ತಾಡುವುದರಲ್ಲಿ ಅರ್ಥವಿಲ್ಲ. ಅವರಿಗೆ 10 ಪತ್ನಿಯರು ಇರಲಿ, ಆದರೆ ಅವರು ಬದುಕಿದ್ದಾಗ ಯಾರೂ ಏನನ್ನೂ ಮಾಡಿಲ್ಲ’ ಎಂದು ಆಂಟೋನೆಟ್ ಹೇಳಿದ್ದಾರೆ. ಗುರುವಾರ ಬೆಂಗಳೂರಲ್ಲಿ ಕಣ್ಣನ್ ಅಂತ್ಯಕ್ರಿಯೆ ನಡೆಯಲಿದೆ.
ಭಾರತದ ಶ್ರೇಷ್ಠ ಫುಟ್ಬಾಲ್ ಕ್ಲಬ್‌ಗಳಾದ ಮೋಹನ್ ಬಗಾನ್ ಹಾಗೂ ಈಸ್ಟ್ ಬೆಂಗಾಲ್ ಪರ ಹಲವು ವರ್ಷಗಳ ಕಾಲ ಆಡಿದ್ದ ಕಣ್ಣನ್, ದಶಕಕ್ಕೂ ಹಿಂದಿನಿಂದ ತೀವ್ರ ಅಸ್ಥಿಸಂಧಿವಾತದಿಂದ ಬಳಲುತ್ತಿದ್ದರು. ಭಾರತ ಪರ 1966ರ ಏಷ್ಯನ್ ಗೇಮ್ಸ್, 1968ರ ಮೆರೆದೆಕಾ ಕಪ್‌ನಲ್ಲಿ ಆಡಿದ್ದರು. 1982ರಲ್ಲಿ ಅವರು ನಿವೃತ್ತಿ ಪಡೆದಿದ್ದರು.