ವಾಷಿಂಗ್ಟನ್‌(ಆ.27): 1983ರ ಏಷ್ಯನ್‌ ಚಾಂಪಿ​ಯನ್‌ಶಿಪ್‌ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರ​ತದ ಮಾಜಿ ಅಥ್ಲೀಟ್‌ ಇಕ್ಬಾಲ್‌ ಸಿಂಗ್‌, ತಮ್ಮ ತಾಯಿ ನಸೀಬ್‌ ಕೌರ್‌ ಹಾಗೂ ಪತ್ನಿ​ ಜಸ್ಪಾಲ್‌ ಕೌರ್‌ರನ್ನು ಕೊಲೆ ಮಾಡಿ ಆಘಾತ ಮೂಡಿ​ಸಿ​ದ್ದಾರೆ.

ಫಿಲಿ​ಡಾ​ಲ್ಫಿ​ಯಾ​ದಲ್ಲಿ ಹಲವು ವರ್ಷಗಳಿಂದ ಟ್ಯಾಕ್ಸಿ ಚಾಲನೆ ಮಾಡಿ​ಕೊಂಡು ಜೀವನ ನಡೆ​ಸು​ತ್ತಿರುವ 62 ವರ್ಷದ ಇಕ್ಬಾಲ್‌, ಇಬ್ಬ​ರನ್ನೂ ಕತ್ತು ಕೊಯ್ದು ಕೊಂದು, ತಮ್ಮ ಪುತ್ರನಿಗೆ ಕರೆ ಮಾಡಿ ವಿಷಯ ತಿಳಿ​ಸಿ​ದ್ದಾರೆ. ‘ನಾ​ನು ನಿಮ್ಮ ತಾಯಿ ಹಾಗೂ ಅಜ್ಜಿ​ಯನ್ನು ಸಾಯಿ​ಸಿ​ದ್ದೇನೆ. ಪೊಲೀ​ಸ​ರಿಗೆ ತಿಳಿ​ಸು’ ಎಂದು ಪುತ್ರನಿಗೆ ಇಕ್ಬಾಲ್‌ ಹೇಳಿ​ದ್ದಾಗಿ ತಿಳಿದು ಬಂದಿದೆ.

ಫ್ರೀ ಹಿಟ್‌ ರೀತಿ ಫ್ರೀ ಬಾಲ್‌ ಐಡಿಯಾ ಕೊಟ್ಟ ಅಶ್ವಿನ್‌

ಪುತ್ರನ ಜೊತೆಯಲ್ಲೇ ಇದ್ದ ಪುತ್ರಿಯೊಂದಿ​ಗೂ ಇಕ್ಬಾಲ್‌ ಮಾತ​ನಾ​ಡಿದ ನಂತರ, ಅವ​ರಿ​ಬ್ಬರು ಸೇರಿ ತಮ್ಮ ತಾಯಿ ಹಾಗೂ ಅಜ್ಜಿಯ ಸಾವಿನ ವಿಚಾರವನ್ನು ಸ್ಥಳೀಯ ಪೊಲೀ​ಸ​ರಿಗೆ ತಿಳಿ​ಸಿ​ದ್ದಾರೆ. ಇಕ್ಬಾಲ್‌ರ ನಿವಾಸಕ್ಕೆ ಪೊಲೀ​ಸರು ಧಾವಿ​ಸಿ​ದಾಗ, ಇಬ್ಬರು ಮಹಿ​ಳೆ​ಯರ ಶವ ಪತ್ತೆಯಾ​ಗಿದೆ. ಇಕ್ಬಾಲ್‌ರ ದೇಹದ ಮೇಲೆ ರಕ್ತದ ಕಲೆಗಳಿ​ದ್ದಿದ್ದಾಗಿ ಪೊಲೀ​ಸರು ತಿಳಿ​ಸಿದ್ದು, ಅವ​ರನ್ನು ವಶಕ್ಕೆ ಪಡೆ​ಯ​ಲಾ​ಗಿದೆ. ಕೊಲೆಗೆ ಕಾರ​ಣ​ವೇನು ಎನ್ನು​ವುದು ಇನ್ನೂ ತಿಳಿ​ದು​ಬಂದಿಲ್ಲ.