ಐಸಿಸಿ ನೂತನ ಶ್ರೇಯಾಂಕ ಪಟ್ಟಿ ಪ್ರಕಟಗೊಂಡಿದ್ದು, ಅನುಭವಿ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ನಂ.1 ಆಲ್ರೌಂಡರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ: ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ICC) ಇದೀಗ ನೂತನ ಟಿ20 ರ್‍ಯಾಂಕಿಂಗ್ ಪ್ರಕಟಿಸಿದ್ದು, ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಟಿ20 ಸರಣಿ ಗೆದ್ದ ಭಾರತ ತಂಡದ ಆಟಗಾರರ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಐಸಿಸಿ ಟಿ20 ಆಲ್ರೌಂಡರ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಹರಿಣಗಳ ನಾಡಿನಲ್ಲಿ ಸತತ ಎರಡು ಶತಕ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ತಿಲಕ್ ವರ್ಮಾ ಲಾಂಗ್ ಜಂಪ್ ಮಾಡಿದ್ದು, ಟಾಪ್ 10 ಬ್ಯಾಟರ್‌ಗಳ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಸರಣಿಗೂ ಮುನ್ನ ಹಾರ್ದಿಕ್ ಪಾಂಡ್ಯ, ಐಸಿಸಿ ಟಿ20 ಆಲ್ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಹರಿಣಗಳ ನಾಡಿನಲ್ಲಿ ನಡೆದ 4 ಪಂದ್ಯಗಳ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಈ ಮೂಲಕ ಪಾಂಡ್ಯ 244 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ನೇಪಾಳದ ದಿಪೇಂದ್ರ ಸಿಂಗ್ ಐರ್ರೆ ಎರಡನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಆದರೆ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಎರಡು ಸ್ಥಾನ ಕುಸಿತ ಕಂಡು 230 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.
IPL ಹರಾಜಿನಲ್ಲಿ ರಾಹುಲ್‌ಗಾಗಿ ಈ 2 ತಂಡಗಳ ನಡುವೆ ಪೈಪೋಟಿ ಎಂದ ಸನ್ನಿ!
ಈ ಮೂಲಕ ಐಸಿಸಿ ಟಿ20 ಆಲ್ರೌಂಡರ್ ರ್‍ಯಾಂಕಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಎರಡನೇ ಬಾರಿಗೆ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಇದೇ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ಹಾರ್ದಿಕ್, ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ನಂ.1 ಆಲ್ರೌಂಡರ್ ಆಗಿ ಹೊರಹೊಮ್ಮಿದ್ದರು.
ಇನ್ನು ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಎರಡು ಶತಕ ಸಹಿತ 280 ರನ್ ಬಾರಿಸಿ ಮಿಂಚಿದ್ದ ತಿಲಕ್ ವರ್ಮಾ, ಇದೇ ಮೊದಲ ಬಾರಿಗೆ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಿಲಕ್ ವರ್ಮಾ ಇದೀಗ ಟಿ20 ಶ್ರೇಯಾಂಕದಲ್ಲಿ ಬರೋಬ್ಬರಿ 69 ಸ್ಥಾನ ಜಿಗಿತ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 855 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ಟ್ರ್ಯಾವಿಸ್ ಹೆಡ್ ಮೊದಲ ಸ್ಥಾನದಲ್ಲಿದ್ದರೇ, 828 ರೇಟಿಂಗ್ ಅಂಕಗಳೊಂದಿಗೆ ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ತಿಲಕ್ ವರ್ಮಾ 806 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್ ಸದ್ಯ ಒಂದು ಸ್ಥಾನ ಕುಸಿತ ಕಂಡು 4ನೇ ಸ್ಥಾನಕ್ಕೆ ಜಾರಿದ್ದರೇ, ಯಶಸ್ವಿ ಜೈಸ್ವಾಲ್ ಕೂಡಾ ಒಂದು ಸ್ಥಾನ ಕುಸಿದು 8ನೇ ಸ್ಥಾನದಲ್ಲಿದ್ದಾರೆ.
ಈ 5 ಸ್ಟಾರ್ ಆಟಗಾರರನ್ನು ಕೈಬಿಟ್ಟು ಮಹಾ ಯಡವಟ್ಟು ಮಾಡಿಕೊಂಡ ಐಪಿಎಲ್ ಫ್ರಾಂಚೈಸಿ!
ಇನ್ನು ಟಿ20 ಬೌಲರ್ ರ್‍ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಇಂಗ್ಲೆಂಡ್‌ನ ಆದಿಲ್ ರಶೀದ್ ಹಾಗೂ ಶ್ರೀಲಂಕಾದ ವನಿಂದು ಹಸರಂಗ ಮುಂದುವರೆದಿದ್ದಾರೆ. ಇನ್ನು ಇನ್ನು ಆಸ್ಟ್ರೇಲಿಯಾದ ಆಡಂ ಜಂಪಾ 5 ಸ್ಥಾನ ಜಿಗಿತ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಭಾರತದ ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ಎಡಗೈ ವೇಗಿ ಆರ್ಶದೀಪ್ ಸಿಂಗ್ ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದಿದ್ದಾರೆ.
