ಫೋರ್ಸ್ ಇಂಡಿಯಾ ಮಾಲೀಕತ್ವದಿಂದಲೂ ವಿಜಯ್ ಮಲ್ಯಗೆ ಕೊಕ್!

Force India Formula 1 ends tie with Vijay Mallya
Highlights

ಫಾರ್ಮುಲಾ 1 ರೇಸಿಂಗ್‌ನಲ್ಲಿ ಭಾರತದ ಪ್ರಭುತ್ವ ಅಂತ್ಯಗೊಂಡಿದೆ. ಕಳೆದ 10 ವರ್ಷಗಳಿಂದ ಫೋರ್ಸ್ ಇಂಡಿಯಾ ಸಹಮಾಲೀಕನಾಗಿದ್ದ ಉದ್ಯಮಿ ವಿಜಯ್ ಮಲ್ಯ, ಅನಿವಾರ್ಯವಾಗಿ ಫಾರ್ಮುಲಾ ತಂಡದಿಂದ ಹೊರ ನಡೆದಿದ್ದಾರೆ. ಇದೀಗ ಫೋರ್ಸ್ ಇಂಡಿಯಾ ಹೊಸ ಮಾಲೀಕತ್ವದಲ್ಲಿ ಪೈಪೋಟಿ ನಡೆಸಲಿದೆ.

ಲಂಡನ್(ಆ.08): ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರರಾಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸಾಮ್ರಾಜ್ಯ ಒಂದೊಂದಾಗಿ ಕಳಚುತ್ತಿದೆ. ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈತಪ್ಪಿ ಹೋಗಿ ವರ್ಷಗಳೇ ಉರುಳಿದೆ. ಇದೀಗ ಮಲ್ಯ ಸಹಮಾಲೀಕತ್ವದ ಫೋರ್ಸ್ ಇಂಡಿಯಾ ಕೂಡ ಕೈತಪ್ಪಿದೆ.

ವಿಜಯ್ ಮಲ್ಯ ಸಹಮಾಲೀಕತ್ವದ ಫಾರ್ಮುಲಾ ರೇಸ್ ಫೋರ್ಸ್ ಇಂಡಿಯಾ ಕೆಲ ವರ್ಷಗಳಿಂದ ನಷ್ಟದಲ್ಲಿತ್ತು. ದಿವಾಳಿಯಾಗೋ ಸಂದರ್ಭದಲ್ಲಿದ್ದ ಫೋರ್ಸ್ ಇಂಡಿಯಾ ಇದೀಗ ಹೊಸ ಮಾಲೀಕರನ್ನ ಕಂಡುಕೊಂಡಿದೆ. ಇದರೊಂದಿಗೆ 10 ವರ್ಷಗಳ ಮಲ್ಯ ಸಹಮಾಲೀಕತ್ವ ಅಂತ್ಯಗೊಂಡಿದೆ.

ಕೆನಡಾ ಮೂಲದ ಫ್ಯಾಷನ್ ಉದ್ಯಮಿ ಲಾರೆನ್ಸ್ ಸ್ಟ್ರಾಲ್ ತಂಡವನ್ನ ಖರೀದಿಸಿದ್ದಾರೆ. ಲಾರೆನ್ಸ್‌ರ ಪುತ್ರ ಲ್ಯಾನ್ಸ್ ಸ್ಟ್ರಾಲ್ ಸದ್ಯ ವಿಲಿಯಮ್ಸ್ ತಂಡದ ಚಾಲಕರಾಗಿದ್ದಾರೆ.  ಇದೀಗ ಫೋರ್ಸ್ ಇಂಡಿಯಾ ತಂಡದ ಚಾಲಕಾಗಿ ಲ್ಯಾನ್ಸ್ ಸ್ಟ್ರಾಲ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಹೊಸ ಆಡಳಿತ ಮಂಡಳಿಯಿಂದ ಫೋರ್ಸ್ ಇಂಡಿಯಾ ಫಾರ್ಮುಲಾ ಸಂಸ್ಥೆಯ 405 ಉದ್ಯೋಗಿಗಳು ನಿಟ್ಟುಸಿರು ಬಿಡುವಂತಾಗಿದೆ. ಸಂಭಾವನೆ ನೀಡದ ಫೋರ್ಸ್ ಇಂಡಿಯಾ ವಿರುದ್ಧ ಕಳೆದ ವರ್ಷ  ಚಾಲಕ ಸರ್ಜಿಯೋ ಪೆರೆಝ್ ಕಾನೂನು ಮೆಟ್ಟಿಲೇರಿದ್ದರು. ಇದೀಗ ಫೋರ್ಸ್ ಇಂಡಿಯಾ ನೂತನ ಮಾಲೀಕತ್ವದಿಂದ ಚೇತರಿಸಿಕೊಂಡಿದೆ.

loader