ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಮೋಸವಾದಂತೆ ಅನಿಸಿದೆ, ರೊನಾಲ್ಡೊ ಸ್ಫೋಟಕ ಹೇಳಿಕೆ!
ವೃತ್ತಿಜೀವನದ ಅತ್ಯಂತ ಯಶಸ್ವಿ ವರ್ಷಗಳನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ಕಳೆದಿರುವ ಸೂಪರ್ ಸ್ಟಾರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೋ, ಮೊದಲ ಬಾರಿಗೆ ಕ್ಲಬ್ ಬಗ್ಗೆ ಆರೋಪ ಮಾಡಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನಿಂದ ನನಗೆ ಮೋಸವಾದಂತೆ ಅನಿಸಿದೆ ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಲಂಡನ್ (ನ.15): ಪೋರ್ಚುಗಲ್ ತಂಡದ ಆಟಗಾರ, ವಿಶ್ವ ಫುಟ್‌ಬಾಲ್‌ನ ಸೂಪರ್ ಸ್ಟಾರ್ ಪ್ಲೇಯರ್ ತನ್ನ ಕ್ಲಬ್ ಇಂಗ್ಲೀಷ್ ಪ್ರೀಮಿಯರ್ ಲೀಗ್‌ನ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ದಿ ಸನ್ ಪತ್ರಿಕೆಯ ಪಿಯರ್ಸ್ ಮಾರ್ಗ್‌ನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಐದು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ ಮಾಜಿ ಕ್ಲಬ್ ಬಗ್ಗೆ ದೊಡ್ಡ ಆರೋಪ ಮಾಡಿದ್ದಾರೆ. ಪ್ರಸ್ತುತ ತಂಡದ ಮ್ಯಾನೇಜರ್ ಆಗಿರವ ಎರಿಕ್ ಟೆನ್ ಹಾಗ್ ಹಾಗೂ ತಂಡದ ಇತರ ಹಿರಿಯ ಅಧಿಕಾರಿಗಳು, ತಮ್ಮನ್ನು ಕ್ಲಬ್‌ನಿಂದ ಹೊರಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದರೊಂದಿಗೆ ಕ್ಲಬ್‌ನ ಮಾಲೀಕರಾಗಿರುವ ಗ್ಲೇಜರ್ ಕುಟುಂಬದ ಬಗ್ಗೆ ನೇರವಾದ ಆರೋಪ ಮಾಡಿರುವ ರೊನಾಲ್ಡೊ, ಗ್ಲೇಜರ್ ಕುಟುಂಬ ಕ್ಲಬ್‌ನ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ. ಕ್ರಿಶ್ಚಿಯಾನೋ ರೊನಾಲ್ಡೊ ಅವರ ಈ ಆರೋಪ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಕ್ಲಬ್, 'ರೊನಾಲ್ಡೊ ಅವರ ಸಂದರ್ಶನವನ್ನು ಕ್ಲಬ್ ಕೂಡ ಗಮಿಸಿದೆ. ಸಂಪೂರ್ಣ ಸತ್ಯಗಳನ್ನು ತಿಳಿದ ಬಳಿಕ ಕ್ಲಬ್ ತನ್ನ ಪ್ರತಿಕ್ರಿಯೆ ನೀಡುತ್ತದೆ. ಪ್ರಸ್ತುತ ಇಡೀ ತಂಡದ ಗಮನ, ಋತುವಿನ 2ನೇ ಅವಧಿಯ ಬಗ್ಗೆ ಇದೆ. ಅದರೊಂದಿಗೆ ಆಟಗಾರರು, ಮ್ಯಾನೇಜರ್, ಸಿಬ್ಬಂದಿ ಮತ್ತು ಅಭಿಮಾನಿಗಳ ನಡುವಿನ ಒಗ್ಗಟ್ಟನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತದೆ' ಎಂದು ಹೇಳಿದೆ.
"ನನಗೆ ದ್ರೋಹ ಆದಂತೆ ಅನಿಸಿದೆ. ಈ ವರ್ಷ ಮಾತ್ರವಲ್ಲದೆ ಕಳೆದ ವರ್ಷವೂ ಕೂಡ ತಂಡದಲ್ಲಿರುವ ಕೆಲವರಿಗೆ ನಾನು ಕ್ಲಬ್‌ನಲ್ಲಿ ಇರುವುದು ಇಷ್ಟವಿರಲಿಲ್ಲ ಎಂದು ನನಗೆ ಅನಿಸಿದೆ' ಎಂದು ಇಂಗ್ಲೆಂಡ್‌ನ ಟ್ಯಾಬ್ಲಾಯ್ಡ್ ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ. 14 ತಿಂಗಳ ಹಿಂದೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಪರವಾಗಿ ಆಡಲು ರೊನಾಲ್ಡೊ ಸಹಿ ಹಾಕಿದ ಬಳಿಕ ಈವರೆಗೂ ಓಲೆ ಗುನ್ನಾರ್ ಸೋಲ್ಸ್‌ಜೇರ್, ರಾಲ್ಫ್ ರಾಗ್ನಿಕ್ ಮತ್ತು ಎರಿಕ್ ಟೆನ್ ಹ್ಯಾಗ್ ಹೆಸರಿನ ಮ್ಯಾನೇಜರ್ ಅಡಿಯಲ್ಲಿ ಆಡಿದ್ದಾರೆ.
ಈ ಮೂವರ ಬಗ್ಗೆಯೂ ಮಾತನಾಡಿರುವ ರೊನಾಲ್ಡೊ, ತಾವು ಕ್ಲಬ್ ಬಂದ ಕೆಲವೇ ವಾರಗಳಲ್ಲಿ ವಜಾಗೊಂಡ ಮ್ಯಾನೇಜರ್ ಹಾಗೂ ಮಾಜಿ ಸಹ ಆಟಗಾರ ಓಲೆ ಗುನ್ನಾರ್ ಸೋಲ್ಸ್‌ಜೇರ್ ಬಗ್ಗೆ ಸಾಕಷ್ಟು ಗೌರವವಿದೆ ಎಂದು ಹೇಳಿರುವ ರೊನಾಲ್ಡೊ, ನಂತರದ ಇಬ್ಬರು ಮ್ಯಾನೇಜರ್‌ಗಳಾಗಿರುವ ರಾಲ್ಫ್ ರಾಗ್ನಿಕ್ ಮತ್ತು ಎರಿಕ್ ಟೆನ್ ಹ್ಯಾಗ್ ಬಗ್ಗೆ ಹೇಳಲು ಒಳ್ಳೆಯ ಅಂಶಗಳಿಲ್ಲ ಎಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಯಾವುದೇ ಫುಟ್‌ಬಾಲ್ ಕ್ಲಬ್‌ಗೆ ಮ್ಯಾನೇಜರ್ ಆದ ಅನುಭವವೇ ಇಲ್ಲದ ರಾಗ್ನಿಕ್ ಬಗ್ಗೆ ಮಾತನಾಡಿರುವ ರೊನಾಲ್ಡೊ, 'ನೀವು ಯಾವುದೇ ತಂಡಕ್ಕೆ ಕೋಚ್ ಆದ ಅನುಭವ ಇಲ್ಲದೇ ಹೋದಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್‌ನಂಥ ಕ್ಲಬ್‌ಗೆ ಬಾಸ್ ಆಗಲು ಹೇಗೆ ಸಾಧ್ಯ? ನಾನು ಅವರ ಹೆಸರನ್ನೇ ಈವರೆಗೂ ಕೇಳಿರಲಿಲ್ಲ' ಎಂದು ಹೇಳಿದ್ದಾರೆ.
ಕಳೆದ ತಿಂಗಳು ಟೊಟೆನ್‌ಹ್ಯಾಂ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಬದಲಿ ಆಟಗಾರನಾಗಿ ಬರಲು ನಿರಾಕರಿಸಿದ್ದ ರೊನಾಲ್ಡೊರನ್ನು ಅಮಾನತು ಮಾಡಿದ್ದ ಟೆನ್ ಹ್ಯಾಗ್ ಬಗ್ಗೆಯೂ ಮಾತನಾಡಿರುವ ಅವರು, 'ಟೆನ್ ಹ್ಯಾಗ್ ಕುರಿತಾಗಿ ನನಗೆ ಒಂಚೂರು ಗೌರವವೂ ಇಲ್ಲ. ಯಾಕೆಂದರೆ ಆ ವ್ಯಕ್ತಿ ನನಗೆ ಗೌರವ ನೀಡೋದಿಲ್ಲ. ನೀವು ನನಗೆ ಗೌರವ ನೀಡದೇ ಇದ್ದರೆ, ನಾನು ಎಂದೆಂದಿಗೂ ನಿಮಗೆ ಗೌರವ ನೀಡೋದಿಲ್ಲ' ಎಂದು ರೊನಾಲ್ಡೊ ಮಾತನಾಡಿದ್ದಾರೆ.
Cristiano Ronaldo Statue In Goa : ವಿವಾದಕ್ಕೆ ಕಾರಣವಾದ ಫುಟ್ ಬಾಲ್ ದಿಗ್ಗಜನ ಪ್ರತಿಮೆ!
ಇಪಿಎಲ್‌ನಲ್ಲಿ ಮರಳುವ ಇಚ್ಛೆ ಮಾಡಿದಾಗ, ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ದೊಡ್ಡ ಎದುರಾಳಿ ಮ್ಯಾಂಚೆಸ್ಟರ್ ಸಿಟಿ ಕೂಡ ರೊನಾಲ್ಡೊರನ್ನು ತಂಡಕ್ಕೆ ಸೇರಿಸಿಕೊಳ್ಳುವ ಇಚ್ಛೆ ಹೊಂದಿತ್ತು. ಆದರೆ, ತಮ್ಮ ಗುರು ಎಂದೇ ಹೇಳುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಮಾಜಿ ಮ್ಯಾನೇಜರ್ ಸರ್ ಅಲೆಕ್ಸ್ ಫರ್ಗ್ಯುಸನ್ ಅವರ ಒಂದು ಕರೆ ತನ್ನ ನಿರ್ಧಾರವನ್ನು ಬದಲಿಸುವಂತೆ ಮಾಡಿತು ಎಂದು ರೊನಾಲ್ಡೊ ಹೇಳಿದ್ದಾರೆ. 'ನಾನು ನನ್ನ ಹೃದಯದ ನಿರ್ಣಯವನ್ನು ಒಪ್ಪಿದೆ. ಅವರು (ಸರ್ ಅಲೆಕ್ಸ್) ನನಗೆ ಕರೆ ಮಾಡಿ, 'ಮ್ಯಾಂಚೆಸ್ಟರ್ ಸಿಟಿಯಲ್ಲಿ ನಿಮ್ಮನ್ನು ನೋಡುವುದು ಅಸಾಧ್ಯ' ಎಂದಿದ್ದರು. ಅದಕ್ಕೆ ನಾನು 'ಒಕೆ, ಬಾಸ್' ಎಂದಷ್ಟೇ ಹೇಳಿದ್ದೆ' ಎಂದರು.
ಕ್ರಿಸ್ಟಿಯಾನೋ ರೊನಾಲ್ಡೋ ಜರ್ಸಿಗಳ ಸೇಲ್‌ನಿಂದ 1,900 ಕೋಟಿ ರುಪಾಯಿ ಗಳಿಕೆ!
ಇದಾದ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ತಮ್ಮ 2ನೇ ಅವಧಿ ಆರಂಭಿಸಿದ್ದ ರೊನಾಲ್ಡೊ ನ್ಯೂ ಕಾಸ್ಟ್ಲೆ ವಿರುದ್ಧದ ಮೊದಲ ಪಂದ್ಯದಲ್ಲಿ ಜೋಡಿ ಗೋಲು ಬಾರಿಸುವ ಮೂಲಕ ತಂಡದ 4-1 ಗೆಲುವಿಗೆ ಕಾರಣರಾಗಿದ್ದರು. ಆದರೆ, ಅದಾದ ಕೆಲವೇ ದಿನಗಳಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಈಗಿನ ಅಸಲಿ ಮುಖ ಗೊತ್ತಾಗಿತ್ತು. 2009ರಲ್ಲಿ ತಾವು ಬಿಟ್ಟುಹೋದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಹಾಗೂ 2021ರ ಕ್ಲಬ್ ಸಂಪೂರ್ಣ ಭಿನ್ನವಾಗಿತ್ತು ಎನ್ನುವ ಅರ್ಥದಲ್ಲಿ ರೊನಾಲ್ಡೊ ಮಾತನಾಡಿದ್ದಾರೆ.