ಕಂಠೀರವದಲ್ಲಿಂದು ಫುಟ್ಬಾಲ್ ಕಲರವ: ಬೆಂಗ್ಳೂರು ಎಫ್’ಸಿಗಿಂದು ಕಠಿಣ ಸವಾಲು
ಅಲ್ಟಿನ್ ಅಸರ್ ಕಳೆದ ವರ್ಷದ ರನ್ನರ್ ಅಪ್ ಇಸ್ಟಿಕ್ಲೋಲ್ ಎಫ್‌ಸಿ ವಿರುದ್ಧ ಜಯಗಳಿಸಿ ನಾಕೌಟ್ ಹಂತಕ್ಕೇರಿದೆ. ಹೀಗಾಗಿ ಬಿಎಫ್‌ಸಿಗೆ ಗೆಲುವು ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಜತೆಗೆ ತಂಡ ಸ್ಥಳೀಯ ಯೊಕಾರಿ ಲೀಗಾದಲ್ಲಿ ಕಳೆದ 4 ವರ್ಷಗಳಿಂದ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬೆಂಗಳೂರು[ಆ.22]: ಸೂಪರ್ ಕಪ್ ಚಾಂಪಿಯನ್ಸ್ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ, 2018/19ರ ಋುತುವನ್ನು ಬಲಿಷ್ಠ ತಂಡದೊಂದಿಗೆ ಸೆಣಸುವ ಮೂಲಕ ಆರಂಭಿಸಲಿದೆ. ಎಎಫ್‌ಸಿ ಕಪ್ ಅಂತರ ವಲಯ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯವನ್ನು ಇಂದು ಕಂಠೀರವ ಕ್ರೀಡಾಂಗಣದಲ್ಲಿ ತುರ್ಕ್ಮೆನಿಸ್ತಾನದ ಆಲ್ಟಿನ್ ಅಸರ್ ತಂಡದ ವಿರುದ್ಧ ಆಡಲಿದೆ. ದ್ವಿತೀಯ ಚರಣ ಆ.29ರಂದು ಆಶ್ಗಾಬತ್‌ನಲ್ಲಿ ನಡೆಯಲಿದೆ.
ಅಲ್ಟಿನ್ ಅಸರ್ ಕಳೆದ ವರ್ಷದ ರನ್ನರ್ ಅಪ್ ಇಸ್ಟಿಕ್ಲೋಲ್ ಎಫ್‌ಸಿ ವಿರುದ್ಧ ಜಯಗಳಿಸಿ ನಾಕೌಟ್ ಹಂತಕ್ಕೇರಿದೆ. ಹೀಗಾಗಿ ಬಿಎಫ್‌ಸಿಗೆ ಗೆಲುವು ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಜತೆಗೆ ತಂಡ ಸ್ಥಳೀಯ ಯೊಕಾರಿ ಲೀಗಾದಲ್ಲಿ ಕಳೆದ 4 ವರ್ಷಗಳಿಂದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಮೊದಲ ಬಾರಿಗೆ ಆಲ್ಟಿನ್ ತಂಡ ಎಎಫ್‌ಸಿ ಕಪ್ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.
ಬಿಎಫ್‌ಸಿಗೆ ಲಯದ ಸಮಸ್ಯೆ: ಭಾರತದ ನಂ.1 ಕ್ಲಬ್ ಬಿಎಫ್‌ಸಿ, ಋುತು ಆರಂಭಕ್ಕೂ ಮುನ್ನ ಸ್ಪೇನ್ ಪ್ರವಾಸ ಕೈಗೊಂಡಿತ್ತು. ಅಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಜಯ ಗಳಿಸಲು ಸಾಧ್ಯವಾಗದೆ ಹಿಂದಿರುಗಿತ್ತು. ಆದರೆ ಬಾರ್ಸಿಲೋನಾ ‘ಬಿ’ ಹಾಗೂ ವಿಲ್ಲಾರಿಯಲ್‌ನಂತಹ ಪ್ರಬಲ ತಂಡಗಳ ಎದುರು ಆಡಿದ ಅನುಭವ, ಸುನಿಲ್ ಚೆಟ್ರಿ ಪಡೆಗೆ ಖಂಡಿತವಾಗಿಯೂ ನೆರವಾಗಲಿದೆ.
ಪ್ರತಿ ಬಾರಿಯಂತೆ ತಂಡ ಈ ಸಲವೂ ಚೆಟ್ರಿ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ಕಳೆದ ಋುತುವಿನಲ್ಲಿ ಗೋಲಿನ ಮಳೆ ಸುರಿಸಿದ್ದ ಮಿಕು, ಮತ್ತೊಮ್ಮೆ ಪ್ರಮುಖ ಪಾತ್ರ ನಿರ್ವಹಿಸಬೇಕಿದೆ. ಉದಾಂತ, ರಾಹುಲ್ ಭೇಕೆಯಂತಹ ದೇಸಿ ತಾರೆಯರ ಮೇಲೂ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಇವರೆಲ್ಲರ ಜತೆಗೆ ಗೋಲ್‌ಕೀಪರ್ ಗುರ್‌ಪ್ರೀತ್ ಸಂಧು ಪಾತ್ರ ಅತ್ಯಂತ ಮಹತ್ವದಾಗಲಿದೆ. ಬಿಎಫ್‌ಸಿಯ ಗೋಡೆ ಎಂದೇ ಕರೆಸಿಕೊಳ್ಳುವ ಗುರ್‌ಪ್ರೀತ್‌ಗೆ ಆಲ್ಟಿನ್ ಅಸರ್‌ನ ಯುವ ಸ್ಟ್ರೈಕರ್’ಗಳಿಂದ ಭಾರೀ ಪೈಪೋಟಿ ಎದುರಾಗಲಿದೆ.
ಭದ್ರಕೋಟೆ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಬಿಎಫ್‌ಸಿ, ಮೊದಲ ಚರಣದಲ್ಲೇ ಉತ್ತಮ ಗೋಲು ವ್ಯತ್ಯಾಸದೊಂದಿಗೆ ಜಯ ಗಳಿಸಲು ಎದುರು ನೋಡುತ್ತಿದೆ. ದ್ವಿತೀಯ ಚರಣವನ್ನು ತುರ್ಕ್ಮೆನಿಸ್ತಾನದಲ್ಲಿ ಆಡಲಿದ್ದು, ಅಲ್ಲಿನ ವಾತಾವರಣದಲ್ಲಿ ಗೋಲು ಗಳಿಸಲು ಕಷ್ಟವಾಗಬಹುದು ಎನ್ನುವ ಅರಿವು ತಂಡಕ್ಕಿದೆ ಎಂದು ಕೋಚ್ ಹೇಳಿದ್ದಾರೆ.
ತವರು ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ಬಿಎಫ್‌ಸಿಗೆ ಸದಾ ಅತ್ಯುತ್ತಮ ಬೆಂಬಲ ದೊರೆತಿದ್ದು, ಈ ಪಂದ್ಯಕ್ಕೂ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ತಂಡ ಎದುರು ನೋಡುತ್ತಿದೆ.