ನವದೆಹಲಿ (ಸೆ.28): ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಹಗರಣದಿಂದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತ ಸ್ವರೂಪದ ಆಮೂಲಾಗ್ರ ಬದಲಾವಣೆಗೆ ನ್ಯಾ. ಲೋಧಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳ ಅನುಷ್ಠಾನದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡಿರುವ ಸರ್ವೋಚ್ಚ ನ್ಯಾಯಾಲಯ, ಮಾರ್ಗಸೂಚಿಗಳನ್ನು ಪಾಲಿಸಿ ಇಲ್ಲವೇ ಮುಂದಿನ ಆದೇಶಕ್ಕೆ ಸಿದ್ಧರಾಗಿ ಎಂದು ಎಚ್ಚರಿಸಿದೆ.

ಶಿಫಾರಸುಗಳನ್ನು ಅನುಷ್ಠಾನಕ್ಕೆ ತರದೆ ಕಾನೂನನ್ನು ಉಲ್ಲಂಘಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ‍್ಯದರ್ಶಿ ಅಜಯ್‌ ಶಿರ್ಕೆ ಅವರನ್ನಷ್ಟೇ ಅಲ್ಲದೆ, ಇಡೀ ಆಡಳಿತ ಮಂಡಳಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಲೋಧಾ ಸಮಿತಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 7ಕ್ಕೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರಿದ್ದ ನ್ಯಾಯಪೀಠ, ಇದೇ ವೇಳೆ ಬಿಸಿಸಿಐನ ನಡೆಯನ್ನು ಕಟು ನುಡಿಗಳಲ್ಲಿ ಟೀಕಿಸಿತು.

‘‘ತಮಗೆ ತಾವೇ ಕಾನೂನು ಎಂಬಂತೆ ಬಿಸಿಸಿಐ ಭಾವಿಸಿದ್ದೇ ಆದಲ್ಲಿ ಅದು ತಪ್ಪಾಗುತ್ತದೆ. ಒಂದು ಉನ್ನತ ಸಮಿತಿಯು ವರದಿ ಸಲ್ಲಿಸಿ ಆ ಕುರಿತು ನ್ಯಾಯಾಲಯ ತೀರ್ಪು ನೀಡಿದ ಮೇಲೂ ಬಿಸಿಸಿಐನಿಂದ ಇಂಥದ್ದೊಂದು ನಡೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಕೂಡಲೇ ಶಿಫಾರಸುಗಳನ್ನು ಅನುಷ್ಠಾನಕ್ಕೆ ತನ್ನಿ, ಇಲ್ಲವೇ ಮುಂದಿನ ಆದೇಶಕ್ಕೆ ಅಣಿಯಾಗಿ’’ ಎಂದು ಠಾಕೂರ್‌ ಎಚ್ಚರಿಸಿದರು.

30ಕ್ಕೆ ವಿಶೇಷ ಸಭೆ ಕರೆದ ಬಿಸಿಸಿಐ

‘‘ಸೆ. 21ರಂದು ಬಿಸಿಸಿಐ ನಡೆಸಿದ ವಾರ್ಷಿಕ ಮಹಾಸಭೆ ಕೂಡ ನಮ್ಮ ಶಿಫಾರಸುಗಳ ಸ್ಪಷ್ಟಉಲ್ಲಂಘನೆಯಾಗಿದೆ. 2016-17ನೇ ಸಾಲಿಗೆ ಹಲವಾರು ಸಮಿತಿಗಳನ್ನು ಬಿಸಿಸಿಐ ಆ ಸಭೆಯಲ್ಲಿ ನೇಮಿಸಿದೆ. ಮೊದಲಿಗೆ ಇದೇ 30ರಂದು ಎಲ್ಲ ಶಿಫಾರಸುಗಳು ಅನುಷ್ಠಾನವಾಗಬೇಕೆಂದು ನಾವು ಗಡುವು ನೀಡಿದ್ದೆವು. ಅಂತೆಯೇ ಡಿಸೆಂಬರ್‌ 15ರೊಳಗೆ ಈಗಿನ ಕಾರ‍್ಯಕಾರಿ ಸಮಿತಿ ಬದಲಿಗೆ 9 ಸದಸ್ಯರ ಅಪೆಕ್ಸ್‌ ಸಮಿತಿಯನ್ನು ನೇಮಿಸಲು ಸೂಚಿಸಿದೆ. ಆದರೆ, ಬಿಸಿಸಿಐ ಇದಾವುದರ ಪಾಲನೆಗೂ ಮುಂದಾಗಿಲ್ಲ’’ ಎಂದು ಲೋಧಾ ದೂರಿದ್ದಾರೆ. ಇನ್ನು ಲೋಧಾ ಸಮಿತಿಯ ಶಿಫಾರಸುಗಳ ಅವಲೋಕನಕ್ಕೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರನ್ನು ಬಿಸಿಸಿಐ ನೇಮಿಸಿದೆ. ಅಂತೆಯೇ ಅವರ ಸಲಹೆಯಂತೆ ಶಿಫಾರಸುಗಳ ವಿರುದ್ಧ ಪುನರ್‌ ಪರಿಶೀಲನಾ ಅರ್ಜಿಯನ್ನು ದಾಖಲಿಸಿದೆ. ಆದರೆ, ಬುಧವಾರ ನ್ಯಾಯಾಲಯದ ನಿಲುವಿನಿಂದಾಗಿ ಶುಕ್ರವಾರ (ಸೆ.30) ಬಿಸಿಸಿಐ ವಿಶೇಷ ತುರ್ತು ಸಭೆ ಕರೆದಿದೆ.

ಖೋಡಾ, ಜತಿನ್‌ಗೆ ಕೊಕ್‌?

ಲೋಧಾ ಸಮಿತಿ ಶಿಫಾರಸುಗಳ ಅನುಷ್ಠಾನ ವಿಷಯದಲ್ಲಿ ಪದೇ ಪದೇ ನ್ಯಾಯಾಲಯದಿಂದ ಗದಾಪ್ರಹಾರಕ್ಕೆ ಒಳಗಾಗುತ್ತಿರುವ ಬಿಸಿಸಿಐ, ಇತ್ತೀಚೆಗಷ್ಟೇ ಆಯ್ಕೆಯಾದ ಟೀಂ ಇಂಡಿಯಾ ಆಯ್ಕೆಸಮಿತಿಯ ಸದಸ್ಯರುಗಳಾದ ಗಗನ್‌ ಖೋಡಾ ಮತ್ತು ಜತಿನ್‌ ಪರಾಂಜಪೆ ಅವರನ್ನು ಆಯ್ಕೆಸಮಿತಿಯಿಂದ ಕೈಬಿಡುವ ಸಾಧ್ಯತೆಗಳಿವೆ. ಟೆಸ್ಟ್‌ ಕ್ರಿಕೆಟ್‌ ಆಡಿದವರನ್ನಷ್ಟೇ ಆಯ್ಕೆಸಮಿತಿಗೆ ಆರಿಸಬೇಕೆಂದು ಲೋಧಾ ಸಮಿತಿ ಶಿಫಾರಸು ಮಾಡಿತ್ತಾದರೂ, ಕೇವಲ 2 ಹಾಗೂ 4 ಏಕದಿನ ಪಂದ್ಯಗಳನ್ನಾಡಿದ ಖೋಡಾ ಮತ್ತು ಜತಿನ್‌ಗೆ ಬಿಸಿಸಿಐ ಮಣೆಹಾಕಿತ್ತು. ಇನ್ನುಳಿದ ಮೂವರ ಪೈಕಿ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ (6) ಸೇರಿದಂತೆ ದೇವಾಂಗ್‌ ಗಾಂಧಿ (4) ಮತ್ತು ಸರಣ್‌ದೀಪ್‌ ಸಿಂಗ್‌ (3) ಟೆಸ್ಟ್‌ ಆಟಗಾರರಾಗಿದ್ದರೂ, ಇವರುಗಳ ಒಟ್ಟಾರೆ ಅನುಭವ ಕೇವಲ 13 ಪಂದ್ಯಗಳಷ್ಟೆ. ಹೀಗಾಗಿ ಆಯ್ಕೆಸಮಿತಿಯನ್ನು ಸಂಪೂರ್ಣವಾಗಿ ಬದಲಿಸಿದರೂ, ಅಚ್ಚರಿಯಿಲ್ಲ. ಮುಖ್ಯವಾಗಿ ಖೋಡಾ ಮತ್ತು ಜತಿನ್‌ ಅವರನ್ನು ಆಯ್ಕೆಸಮಿತಿಯಿಂದ ಕೈಬಿಡುವ ಸಾಧ್ಯತೆಯೇ ಹೆಚ್ಚು ಎಂದು ಬಿಸಿಸಿಐನ ಉನ್ನತ ಮೂಲವೊಂದು ಪ್ರತಿಕ್ರಿಯಿಸಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಅಂತಿಮ. ಆದರೆ, ಇದನ್ನೇ ಧಿಕ್ಕರಿಸಿರುವ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ‍್ಯದರ್ಶಿ ಅಜಯ್‌ ಶಿರ್ಕೆ ಅವರನ್ನು ವಜಾಗೊಳಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಯಾವ ಶಿಫಾರಸನ್ನು ತಾನು ಒಪ್ಪಿಕೊಳ್ಳಲಾಗದು ಎಂದು ಬಿಸಿಸಿಐ ಹೇಳುತ್ತದೋ ಅದನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲು ಸಂಪೂರ್ಣ ಅವಕಾಶವಿದೆ.

ನ್ಯಾ. ಲೋಧಾ ಸುಪ್ರೀಂ ನೇಮಿತ ತ್ರಿಸದಸ್ಯ ಸಮಿತಿ ಮುಖ್ಯಸ್ಥ