ಗುವಾಹಟಿ(ಸೆ.06): 2022ರ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ 2ನೇ ಹಂತದಲ್ಲಿ ಭಾರತ ಆರಂಭಿಕ ಆಘಾತ ಅನು​ಭ​ವಿ​ಸಿದೆ. ಗುರು​ವಾರ ಇಲ್ಲಿ ನಡೆದ ‘ಇ’ ಗುಂಪಿನ ಪಂದ್ಯ​ದ​ಲ್ಲಿ ಭಾರತ ಬಲಿಷ್ಠ ಒಮಾನ್‌ ವಿರುದ್ಧ 1-2 ಗೋಲು​ಗ​ಳಿಂದ ಸೋಲುಂಡಿತು. 

24ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ ಗೋಲು ಬಾರಿ​ಸಿ ಭಾರ​ತಕ್ಕೆ ಮುನ್ನಡೆ ಒದ​ಗಿ​ಸಿ​ದರು. 1-0 ಮುನ್ನಡೆಯೊಂದಿಗೆ ಮೊದ​ಲಾರ್ಧ ಮುಕ್ತಾ​ಯ​ಗೊ​ಳಿ​ಸಿದ ಭಾರತ, ದ್ವಿತೀ​ಯಾರ್ಧದಲ್ಲಿ ಆಘಾತ ಅನು​ಭ​ವಿ​ಸಿತು. 

ಕೊನೆ 8 ನಿಮಿಷಗಳಲ್ಲಿ ಒಮಾನ್‌ 2 ಗೋಲು ಬಾರಿ​ಸಿ, ಆತಿ​ಥೇ​ಯ​ರಿಂದ ಗೆಲುವನ್ನು ಕಸಿ​ದು​ಕೊಂಡಿತು. 82ನೇ ಹಾಗೂ 90ನೇ ನಿಮಿಷದಲ್ಲಿ ಒಮಾನ್‌ ಪರ ರಾಬಿಯ ಅಲ್‌ ಮಂಧರ್‌ ಗೋಲು ಗಳಿ​ಸಿ​ದರು. 

ಮಂಗಳವಾರ ಭಾರತ ತಂಡ ತನ್ನ ಮುಂದಿನ ಕ್ವಾಲಿಫೈಯರ್‌ ಪಂದ್ಯದಲ್ಲಿ ಕತಾರನ್ನು ಎದುರಿಸಲಿದೆ. ಸೆ.10ರಂದು ಭಾರತ ತನ್ನ 2ನೇ ಪಂದ್ಯ​ದಲ್ಲಿ ಕತಾರ್‌ ವಿರುದ್ಧ ಸೆಣ​ಸ​ಲಿದೆ.